ನವದೆಹಲಿ: ಇಷ್ಟರವೆರೆಗೆ ವೃದ್ಧ ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಕೇಂದ್ರ ಸರ್ಕಾರ ವಿಧಿಸುತ್ತಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಆರು ತಿಂಗಳಿಗೆ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ. ಇದರಿಂದ ಇನ್ನು ಮುಂದೆ ಮಕ್ಕಳು ತಮ್ಮ ಪೋಷಕರನ್ನು ನೋಡಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ.
ಪೋಷಕರ ಯೋಗಕ್ಷೇಮ, ನಿರ್ವಹಣೆ ಮತ್ತು ಹಿರಿಯ ನಾಗರಿಕರ ಕಾಯ್ದೆಯಡಿಯಲ್ಲಿ ಈ ತಿದ್ದುಪಡಿಯನ್ನು ತರಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಚಿಂತಿಸಿದೆ.
ಈ ಹಿಂದೆ ಜಾರಿಯಲ್ಲಿದ್ದ ಕಾಯ್ದೆಯಲ್ಲಿ ಹೆತ್ತ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಮಾತ್ರ ಹೊಣೆಗಾರಿಕೆ ನಿಗದಿ ಮಾಡಲಾಗಿತ್ತು. ಆದರೆ ಇದೀಗ ನಿಗದಿಯಾಗುವ ಕಾಯ್ದೆಯಲ್ಲಿ ಈ ಶಿಕ್ಷೆಯನ್ನು ದತ್ತು ಮಕ್ಕಳು, ಮಲ ಮಕ್ಕಳು, ಅಳಿಯ ಸೊಸೆಯನ್ನು ಸಹ ವ್ಯಾಪ್ತಿಗೆ ತರುವಂತೆ ಚಿಂತನೆ ನಡೆಸುತ್ತಿದೆ.
ಈ ಹಿಂದೆ ಹೊಣೆ ಹೊತ್ತು ಕೊಳ್ಳುವ ಮಕ್ಕಳು ಪೋಷಕರಿಗೆ ಪ್ರತಿ ತಿಂಗಳು ಗರಿಷ್ಠ ರೂ. 10 ಸಾವಿರ ನಿರ್ವಾಹಣಾ ವೆಚ್ಚವನ್ನು ನಿಗದಿ ಮಾಡಲಾಗಿತ್ತು. ಆದರೆ ಇದೀಗ ಹೊಸ ಕಾಯ್ದೆಯಲ್ಲಿ ಆ ಮಿತಿಯನ್ನು ರದ್ದು ಪಡಿಸಿ, ಮಕ್ಕಳ ಆದಾಯದ ಅನುಸಾರ ನಿರ್ವಹಣಾ ವೆಚ್ಚವನ್ನು ನಿಗದಿ ಪಡಿಸಲಾಗುವು ಸಾಧ್ಯತೆಗಳು ಹೆಚ್ಚಿವೆ.
ಇನ್ನೂ ಕಾಯ್ದೆಯಲ್ಲಿರುವ ನಿಯಮಗಳನ್ನು ಮಕ್ಕಳು ನಿರ್ಲಕ್ಷಿಸಿದರೆ ವೃದ್ಧ ಪೋಷಕರು ನಿರ್ವಹಣಾ ನ್ಯಾಯಮಂಡಳಿಗೆ ದೂರು ಸಲ್ಲಿಸಬಹುದಾಗಿದೆ.