ನವದೆಹಲಿ: ಮನ್ಸೂನ್ ಆಗಮನವು ಇನ್ನೆರಡು ದಿನ ವಿಳಂಬವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದ್ದು, ಜೂನ್ 8ರಂದು ಕೇರಳಕ್ಕೆ ಆಗಮಿಸಲಿದೆ.
ಇನ್ನೆರಡು ದಿನಗಳ ಕಾಲ ಮಾನ್ಸೂನ್ ಆಗಮನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮುಂದಿನ 96 ಗಂಟೆಗಳಲ್ಲಿ ಮಾನ್ಸೂನ್ ಮಾರುತಗಳು ಕೇರಳಕ್ಕೆ ಪ್ರವೇಶಿಸಲಿದೆ. ಕೇರಳಕ್ಕೆ ಮಾನ್ಸೂನ್ ಮಾರುತುಗಳ ಅಪ್ಪಳಿಸಿದ 24 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಒಡಿಸಾದ ಕೆಲವೊಂದು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳಕ್ಕೆ ಮಾನ್ಸೂನ್ ಅಪ್ಪಳಿಸಿದ ಬಳಿಕ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ 3-4 ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗುವ ವಾತಾವರಣ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಮುಂದಿನ 3-4 ದಿನಗಳ ಕಾಲ ಉಷ್ಣತೆಯು ಗರಿಷ್ಠ ಮಟ್ಟಕ್ಕೆ ಏರಲಿದೆ. ಬಿಸಿ ಹವೆಯು ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.