ಕಾಬೂಲ್: ಇಲ್ಲಿನ ವಿಮಾನ ನಿಲ್ದಾಣದ ಸಂಕೀರ್ಣದಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 35 ದಾಟಿದೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಅಮೆರಿಕ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಕೊನೆಯ ಹಂತದಲ್ಲಿ ಈ ಸ್ಫೋಟ ಸಂಭವಿಸಿದ್ದು, ಕಾಬೂಲ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಭದ್ರತಾ ಅಲರ್ಟ್ ಅನ್ನು ಘೋಷಿಸಿದೆ.
ವಿಮಾನ ನಿಲ್ದಾಣದ ಅಬ್ಬೆ ಗೇಟ್ ಬಳಿ ಮೊದಲ ಸ್ಫೋಟ ಸಂಭವಿಸಿದರೆ ಎರಡನೇ ಸ್ಫೋಟ ಮೊದಲ ಸ್ಫೋಟ ಸಂಭವಿಸಿದ ಸ್ಥಳಕ್ಕಿಂತ ಹೆಚ್ಚು ದೂರ ಇರದ ಬರಾನ್ ಹೊಟೇಲ್ ನಲ್ಲಿ ಸಂಭವಿಸಿದೆ.
ಸ್ಫೋಟದ ಜೊತೆಗೆ ಗುಂಡಿನ ಮೊರೆತವೂ ಕೇಳಿಬಂದಿದ್ದು, ಈ ಕ್ಷಣದಲ್ಲಿ ಅಮೆರಿಕ ನಾಗರಿಕರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವುದು ಹಾಗೂ ವಿಮಾನ ನಿಲ್ದಾಣದ ಗೇತ್ ಗಳತ್ತ ಬರುವುದನ್ನು ತಪ್ಪಿಸಬೇಕಿದೆ, ಈ ಪ್ರದೇಶದಲ್ಲಿರುವ ಅಮೆರಿಕ ನಾಗರಿಕರು ಈಸ್ಟ್ ಗೇಟ್ ಅಥವಾ ನಾರ್ತ್ ಗೇಟ್ ಬಳಿ ಇರುವವರು ತಕ್ಷಣವೇ ಅಲ್ಲಿಂದ ಹೊರಡಬೇಕಿದೆ ಎಂದು ಅಮೆರಿಕ ರಾಯಭಾರಿ ಕಚೇರಿ ತಿಳಿಸಿದೆ.