ವಿಜಯಪುರ : ಹೆಣ್ಣಾಗಿ ಜನಿಸಿ ಗಂಡಾಡಿ ಪರಿವರ್ತನೆಗೊಂಡಿದ್ದ ವ್ಯಕ್ತಿಯನ್ನು ಹಾಡುಹಗಲೆ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ  ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು  ಐವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ.

ನಗರದ ಬಸ್ ನಿಲ್ದಾಣದ ಪರಿಸರದಲ್ಲಿ ಜೂನ್ 21 ರಂದು ಮುಂಗಳಮುಖಿಯರ ಗುಂಪು ಪ್ಯಾಂಟ್ ಧರಿಸಿದ್ದ ಹೆಣ್ಣಿನ ರೂಪದಲ್ಲಿದ್ದ ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿ ಸಂಪೂರ್ಣ ವಿವಸ್ತ್ರಗೊಳಿಸಿ, ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದರು. ಇದೀಗ ಅಲ್ಲದೇ ಅಮಾನವೀಯ ಕೃತ್ಯ ಎಸಗಿದ ಮಂಗಳಮುಖಿಯರಾದ ಅಶ್ವಿನಿ, ಹುಲಿಗೆಮ್ಮ, ಕವಿತಾ, ದಾನಮ್ಮ, ಮಹಾನಮ್ಮ ಎಂಬವರನ್ನು ಬಂಧಿಸಲಾಗಿದೆ.

ಘಟನೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂತ್ರಸ್ತ ಸಚಿನ್ ರೆಡ್ಡಿ, ತಾನು ಹೆಣ್ಣಾಗಿ ಹುಟ್ಟಿದ್ದು, ಹಾರ್ಮೋನ್ ಬದಲಾವಣೆಯಿಂದಾಗಿ ಗಂಡಾಗಿ ಪರಿವರ್ತನೆಗೊಂಡಿದ್ದೇನೆ. ಪುರುಷರಂತೆ ಪ್ಯಾಂಟ್-ಶರ್ಟ್ ಧರಿಸಿ ಪುಣೆಯ ಅಶ್ವಿನಿ ಎಂಬ ಮಂಗಳಮುಖಿ ಜೊತೆ ಒಡನಾಟ ಇರಿಸಿಕೊಂಡಿದ್ದೆ.

ಈ ಹಂತದಲ್ಲಿ ನಾನು ಗಂಡಲ್ಲ ಹೆಣ್ಣೆಂದು ಗೊತ್ತಾಗಿ ಮಂಗಳಮುಖಿಯರು ಪುಣೆಯಲ್ಲಿ ಹಲ್ಲೆ ಮಾಡಿದ್ದರು. ಇದರಿಂದಾಗಿ ನಮ್ಮ ಊರಿಗೆ ಬಂದ ಬಳಿಕ ನಾನು ಸಾಮಾಜಿಕ ಜಾಲ ತಾಣದಲ್ಲಿ ನನ್ನ ವಿರುದ್ಧ ಹಲ್ಲೆ ಮಾಡಿದವರ ವಿರುದ್ಧ ನಿಂದಿಸಿ ಪೋಸ್ಟ್ ಮಾಡಿದ್ದೆ ಎಂದಿದ್ದಾರೆ.