ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಮುಂದಿನ ನಾಲ್ಕು ದಿನಗಳ ಕಾಲ ಉಷ್ಣತೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ತಾಪಮಾನ 33-34 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿದ್ದರೂ, ಆರ್ದ್ರತೆಯ ಪರಿಣಾಮವಾಗಿ ಸುಮಾರು 39 ಡಿಗ್ರಿ ಮಟ್ಟದ ಶಾಖ ಅನುಭವವಾಗುತ್ತಿದೆ. ಮಳೆ ಬಳಿಕ ಉಂಟಾದ ತೇವಾಂಶ ಮತ್ತು ಬಿಸಿಲಿನ ಸಂಯೋಜನೆಯಿಂದ ಜನರು ತೀವ್ರ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದಾರೆ.
ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಸಂಚರಿಸಬಾರದು ಎಂದು ಜಿಲ್ಲಾಡಳಿತ ಸೂಚಿಸಿದೆ. ಉರಿ ಬಿಸಿಲಿನ ಪರಿಣಾಮವಾಗಿ ನಿರ್ಜಲೀಕರಣ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಅಸ್ವಚ್ಛ ನೀರು ಸೇವನೆಯಿಂದ ಡಯೇರಿಯಾ ಸೇರಿದಂತೆ ವಿವಿಧ ಕಾಯಿಲೆಗಳ ಭೀತಿ ಉಂಟಾಗಿದೆ. ಹಿರಿಯರು, ಗರ್ಭಿಣಿಯರು ಹಾಗೂ ಮಕ್ಕಳು ವಿಶೇಷ ಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಇನ್ನೊಂದೆಡೆ, ಎಳನೀರು, ಹಣ್ಣು-ಹಂಪಲುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದು, ಬಿಸಿಲಿನ ತೀವ್ರತೆಯಿಂದ ಕರಾವಳಿ ಭಾಗದ ಜನತೆ ಕಂಗಾಲಾಗಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವುದು, ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯುವುದು ಹಾಗೂ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

