ಸಿಂಧನೂರು: ತಾಲ್ಲೂಕಿನ ವಿರುಪಾಪೂರು ಸೀಮಾದ ನ್ಯಾಷನಲ್ ಲೇಔಟ್‌ನ ಶೆಡ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ಓರ್ವ ಯುವತಿಯನ್ನು ರಕ್ಷಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಎಸ್‌ಪಿ ಅರುಣಾಂಕ್ಷು ಗಿರಿ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ವಿನಾಯಕ ಹಾಗೂ ಪಿಎಸ್‌ಐ ಮೌನೇಶ ರಾಠೋಡ್ ನೇತೃತ್ವದ ತಂಡ ದಾಳಿ ನಡೆಸಿತು.

ದಾಳಿಯ ವೇಳೆ ಯುವತಿಯನ್ನು ರಕ್ಷಿಸಲಾಗಿದ್ದು, ಗಂಗಾನಗರದ ವಿಜಯಕುಮಾರ, ಗಂಗಾಧರ್ ಹಾಗೂ ಮಹಿಬೂಬಿಯಾ ಕಾಲೋನಿಯ ಶ್ಯಾಮಣ್ಣರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಧಿತ ವಿಜಯಕುಮಾರ ಪಂಪಣ್ಣ ತನ್ನ ಸ್ವಂತ ವಾಸಕ್ಕಾಗಿ ಶೆಡ್ ಅನ್ನು ಬಾಡಿಗೆಗೆ ಪಡೆದುಕೊಂಡು, ಬಡತನದಲ್ಲಿರುವ ಮಹಿಳೆಯರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣದ ಆಮಿಷ ತೋರಿಸಿ, ತನ್ನ ಪರಿಚಯದ ಪುರುಷರಿಗೆ ಮಹಿಳೆಯರ ಫೋಟೋಗಳನ್ನು ಕಳುಹಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದನು ಎಂಬ ಮಾಹಿತಿ ತಿಳಿದುಬಂದಿದೆ.