ಉಡುಪಿ : ಬಹುಕಾಲದಿಂದ ಸಾರ್ವಜನಿಕರ ನಿರೀಕ್ಷೆಯಲ್ಲಿದ್ದ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ಇದರ ಮೇಲ್ಸೇತುವೆ ಕೊನೆಗೂ ಲೋಕಾರ್ಪಣೆಗೊಂಡಿದ್ದು, ಇಂದಿನಿಂದ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ. ನೂತನ ಮೇಲ್ಸೇತುವೆಯನ್ನು ಸಂಸದ ಕೋಟ ಅವರು ಮೇಲ್ಸೇತುವೆಯನ್ನು ಉದ್ಘಾಟಿಸಿ ಸಾರ್ವಜನಿಕರಿಗೆ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಕಾಮಗಾರಿಯ ವೇಳೆ ಭೂಗರ್ಭದಲ್ಲಿ ಬಂಡೆ ಸಿಕ್ಕಿದ್ದರಿಂದ ನಿರ್ಮಾಣ ಕಾರ್ಯದಲ್ಲಿ ವಿಳಂಬ ಉಂಟಾಯಿತು. ತಾಂತ್ರಿಕ ಸವಾಲುಗಳನ್ನು ಎದುರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಈ ಯೋಜನೆ ಬಗ್ಗೆ ಸಾರ್ವಜನಿಕರು ನೀಡಿದ ಸಲಹೆಗಳು, ಸೂಚನೆಗಳು ಹಾಗೂ ಟೀಕೆಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ, ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಭಾಗಿತ್ವ ಮತ್ತು ಅಭಿಪ್ರಾಯಗಳು ಬಹುಮುಖ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಇದೇ ಭಾಗದಲ್ಲಿ ನಿರ್ಮಾಣಗೊಂಡ ಸಂತೆಕಟ್ಟೆ ಅಂಡರ್‌ಪಾಸ್ ಈಗಾಗಲೇ ಲೋಕಾರ್ಪಣೆಗೊಂಡು ಸಂಚಾರಕ್ಕೆ ತೆರೆಯಲ್ಪಟ್ಟಿತ್ತು. ಇದೀಗ ಮೇಲ್ಸೇತುವೆಯೂ ಆರಂಭವಾಗಿರುವುದರಿಂದ ಈ ಪ್ರದೇಶದಲ್ಲಿ ದಿನನಿತ್ಯ ಉಂಟಾಗುತ್ತಿದ್ದ ಟ್ರಾಫಿಕ್ ದಟ್ಟಣೆ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗಲಿದೆ. ವಿಶೇಷವಾಗಿ ಉಡುಪಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಈ ಮೇಲ್ಸೇತುವೆ ಮಹತ್ತರ ಅನುಕೂಲ ಕಲ್ಪಿಸಲಿದೆ. ಮೇಲ್ಸೇತುವೆ ಆರಂಭದಿಂದಾಗಿ ಸ್ಥಳೀಯರು ಹಾಗೂ ಪ್ರಯಾಣಿಕರಿಗೆ ವೇಗವಾದ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ, ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಮೇಲಿನ ಟ್ರಾಫಿಕ್‌ ಒತ್ತಡ ಕಡಿಮೆಯಾಗಲಿದೆ.

View this post on Instagram

A post shared by News Karnataka (@newskarnataka)