ಉಡುಪಿ: ಹನುಮಾನ್ ಗ್ಯಾರೇಜ್‌ಗೆ ತೆರಳುವ ರಸ್ತೆ ಹಾಗೂ ವಿಷನ್ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ತಿಂಗಳಿಂದ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಡ್ರೈನೇಜ್ ಕಾಮಗಾರಿ ಹೆಸರಿನಲ್ಲಿ ರಸ್ತೆಯನ್ನು ಅಗೆದು ಬಳಿಕ ಸಮರ್ಪಕವಾಗಿ ದುರಸ್ತಿ ಮಾಡದೆ ಬಿಟ್ಟಿರುವುದರಿಂದ ರಸ್ತೆ ಉದ್ದಕ್ಕೂ ಜಲ್ಲಿ, ಕಲ್ಲು ಹಾಗೂ ಮಣ್ಣು ಹರಡಿಕೊಂಡಿದೆ. ಬಸ್ ಮತ್ತು ಭಾರಿ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಧೂಳು ಮೇಲೇಳುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ರಸ್ತೆಯಲ್ಲಿರುವ ಜಲ್ಲಿಕಲ್ಲುಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಅದರಲ್ಲೂ ವಿಷನ್ ಆಸ್ಪತ್ರೆಗೆ ತೆರಳುವ ಪ್ರಮುಖ ಸಂಪರ್ಕ ರಸ್ತೆಯಾಗಿರುವುದರಿಂದ ರೋಗಿಗಳು, ಅವರ ಸಂಬಂಧಿಕರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಕಳೆದ ಒಂದು ತಿಂಗಳಿಂದ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ ಮೇಲೆ ಜಲ್ಲಿ ಹಾಗೂ ಸಿಮೆಂಟ್ ಮಿಶ್ರಣ ಹಾಕಿ ದುರಸ್ತಿ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ಧೂಳು ಮತ್ತು ಕಲ್ಲಿನ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.

ಈ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕವೂ ಸಮಸ್ಯೆ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯವನ್ನು ಬದಿಗಿಟ್ಟು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ರಸ್ತೆ ದುರಸ್ತಿಯನ್ನು ತಕ್ಷಣ ಕೈಗೊಂಡು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ನಗರಸಭೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

“ಜನರು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಬರುವವರೆಗೆ ಅಧಿಕಾರಿಗಳು ಕಾಯಬೇಕೇ?” ಎಂದು ಸ್ಥಳೀಯರು ಪ್ರಶ್ನಿಸಿದ್ದು, ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ನಿತ್ಯಾನಂದ ಒಳಕಾಡು, ಸಮಾಜಸೇವಕ ಆಗ್ರಹಿಸಿದ್ದಾರೆ.