ಉಡುಪಿ: ಕಂಬಳ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ಅಪಾರ ಅಭಿಮಾನಿ ಬಳಗ ಹೊಂದಿದ್ದ ‘ನಂದಳಿಕೆ ಪಾಂಡು’ (23) ಹೆಸರಿನ ಕೋಣ ವಯೋಸಹಜ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೃತಪಟ್ಟಿದೆ.
ಹಗ್ಗ ವಿಭಾಗದಲ್ಲಿ ವೇಗದ ಓಟಕ್ಕೆ ಹೆಸರಾಗಿದ್ದ ಪಾಂಡು ಕಂಬಳದ ಅಂಗಳದಲ್ಲಿ ಹಲವು ಸಾಧನೆಗಳನ್ನು ಮಾಡಿತ್ತು. ಜೂನಿಯರ್ ಹಗ್ಗ ವಿಭಾಗದಲ್ಲಿ ಸತತ ಎರಡು ವರ್ಷ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಪಾಂಡು, ಬಳಿಕ ಸೀನಿಯರ್ ವಿಭಾಗದಲ್ಲೂ ತನ್ನ ಓಟದ ಮೂಲಕ ಕಂಬಳಾಭಿಮಾನಿಗಳ ಗಮನ ಸೆಳೆದಿತ್ತು.
ಕಾರ್ಕಳದ ಜೀವನ್ದಾಸ್ ಅಡ್ಯಂತಾಯ ಅವರ ಮನೆಯಲ್ಲಿ ಕಂಬಳ ಜೀವನ ಆರಂಭಿಸಿದ ಪಾಂಡುವನ್ನು ಅತ್ತೂರು ಮನ್ಮಥ ಶೆಟ್ಟಿ ಅವರು ತಮ್ಮ ಕಂಬಳ ಪಯಣದ ಆರಂಭಕ್ಕಾಗಿ ಕರೆತಂದಿದ್ದರು. ಬಳಿಕ ಕರಿಂಜೆ ವಿನು ವಿಶ್ವನಾಥ್ ಶೆಟ್ಟಿ ಅವರೊಂದಿಗೆ ಸೀನಿಯರ್ ವಿಭಾಗಕ್ಕೆ ಕಾಲಿಟ್ಟ ಪಾಂಡು, ಕಂಬಳದ ಅಂಗಳದಲ್ಲಿ ದೊಡ್ಡ ಹೆಸರು ಗಳಿಸಿತು. ನಂತರ ನಂದಳಿಕೆ ಶ್ರೀಕಾಂತ್ ಭಟ್ ಅವರ ಹಟ್ಟಿಗೆ ಸೇರಿದಾಗಾಗಲೇ ಪಾಂಡು ‘ಲೆಜೆಂಡ್’ ಪಟ್ಟಕ್ಕೇರಿತ್ತು.
ಕಂಬಳದ ದಿಗ್ಗಜ ಕೋಣಗಳಾದ ಚೆನ್ನ, ಮೋಡೆ ಮೊದಲಾದವುಗಳೊಂದಿಗೆ ಓಡಿ ಪಾಂಡು ಗಮನ ಸೆಳೆದಿತ್ತು. ಖ್ಯಾತ ಮಾಜಿ ಓಟಗಾರ ನಕ್ರೆ ಜಯಕರ ಮಡಿವಾಳ ಅವರು ಪಾಂಡುವಿನೊಂದಿಗೆ ಹಲವು ಪದಕಗಳನ್ನು ಗೆದ್ದಿದ್ದರು. ಓಟದ ಕರೆಯಲ್ಲಿ ಜಯಕರ ಮಡಿವಾಳರ ಸ್ವರಕ್ಕೆ ಪಾಂಡು ಉತ್ತಮವಾಗಿ ಸ್ಪಂದಿಸಿ ವೇಗವಾಗಿ ಓಡುತ್ತಿದ್ದ ದೃಶ್ಯ ಕಂಬಳಾಭಿಮಾನಿಗಳ ನೆನಪಿನಲ್ಲಿ ಇಂದಿಗೂ ಉಳಿದಿದೆ.
ನ್ಯೂನತೆಯನ್ನೂ ಮೆಟ್ಟಿ ನಿಂತ ಓಟ
ಪಾಂಡುವಿನ ಮುಂಭಾಗದ ಬಲ ಕಾಲಿನ ಪಾದ ಹುಟ್ಟಿನಿಂದಲೇ ಸುಮಾರು 70 ಡಿಗ್ರಿ ತಿರುಗಿದ್ದರೂ ಅದರ ಓಟದ ವೇಗಕ್ಕೆ ಅದು ಅಡ್ಡಿಯಾಗಿರಲಿಲ್ಲ. ಕಾಲಿನಲ್ಲಿ ಆಗಾಗ ಡಿಪ್ಲೋಕೇಶನ್ ಹಾಗೂ ಮಣಿಗಂಟಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೂ ಪಾಂಡು ತನ್ನ ಓಟದ ಮೂಲಕವೇ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿತ್ತು.
ಪಾಂಡುವಿನ ಓಟವನ್ನು ಕಣ್ತುಂಬಿಕೊಂಡವರು, ಅದನ್ನು ಹಿಂದಿಕ್ಕುವುದು ಕಷ್ಟವಾಗಿತ್ತು ಎನ್ನುತ್ತಾರೆ. ಫೋರ್ಸ್ನಲ್ಲಿ ಮಂಜೊಟ್ಟಿಗೆ ಹಾರುವಂತೆ ಪಾಂಡು ಓಡುತ್ತಿದ್ದ ದೃಶ್ಯವೇ ನೋಡುಗರಿಗೆ ರೋಮಾಂಚನ ಮೂಡಿಸುತ್ತಿತ್ತು.
ಸುಮಾರು ಮೂರು ವರ್ಷಗಳ ಹಿಂದೆ ಹೊಕ್ಕಾಡಿಗೋಳಿ ಕಂಬಳದಲ್ಲಿ ಪಾಂಡು ಕೊನೆಯ ಬಾರಿಗೆ ಪದಕ ಗೆದ್ದಿತ್ತು. ಬಳಿಕ ನಂದಳಿಕೆ ಶ್ರೀಕಾಂತ್ ಭಟ್ ಅವರ ಹಟ್ಟಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಪಾಂಡು, ಇದೀಗ ಇಹಲೋಕ ತ್ಯಜಿಸಿದೆ. ಕಂಬಳ ಕ್ಷೇತ್ರದ ಅಭಿಮಾನಿಗಳು ಪಾಂಡುವಿನ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

