ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಹೊಸ ಎತ್ತರಕ್ಕೆ ಏರಿದೆ. ಧಾರ್ಮಿಕ ಪ್ರವಾಸೋದ್ಯಮ, ಬೀಚ್ ಟೂರಿಸಂ, ದೈವಾರಾಧನೆ ಮತ್ತು ಪ್ರಕೃತಿ ಸೌಂದರ್ಯ ನೋಡಲು ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಹರಿದು ಬರುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಬಳಿಕ ಶ್ರೀಕೃಷ್ಣ ಮಠಕ್ಕೆ ಬರುವ ಉತ್ತರ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಕೋಟ್ಯಾಂತರ ಪ್ರವಾಸಿಗರು ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿರುವುದು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ತಂದಿದೆ.

ಕರಾವಳಿಯಲ್ಲಿ ಇದೀಗ ಪ್ರವಾಸೋದ್ಯಮ ಪರ್ವ ಶುರುವಾಗಿದೆ. ಜನವರಿಯಿಂದ ಏಪ್ರಿಲ್ ವರೆಗೆ ಸುಮಾರು 3.47 ಕೋಟಿ ಜನ ಪ್ರವಾಸಿಗರು ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಧಾರ್ಮಿಕ ಕ್ಷೇತ್ರಗಳು, ಬೀಚ್‌ಗಳು, ದ್ವೀಪಗಳು ಹಾಗೂ ಸಾಂಸ್ಕೃತಿಕ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.

ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನಂತರ ಉತ್ತರ ಭಾರತದ ರಾಜ್ಯಗಳಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಳ ಕಂಡಿದೆ. ಕಳೆದ ಕೆಲ ತಿಂಗಳಲ್ಲಿ ಸುಮಾರು 9 ಲಕ್ಷ ಮಂದಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿರುವ ಮಾಹಿತಿ ಲಭ್ಯವಾಗಿದೆ.

ಮಲ್ಪೆ ಬೀಚ್, ಸೇಂಟ್ ಮೇರಿಸ್ ದ್ವೀಪ, ಸೀ ವಾಕ್ ಸೇರಿದಂತೆ ಕರಾವಳಿಯ ಪ್ರಮುಖ ಪ್ರವಾಸಿ ತಾಣಗಳು ಜನರಿಂದ ಕಿಕ್ಕಿರಿದು ಕಾಣಿಸುತ್ತಿವೆ. ಸೂರ್ಯಾಸ್ತದ ಸೊಬಗು, ಸಮುದ್ರ ತೀರದ ಮನಮೋಹಕ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತಿದೆ. ಮಕ್ಕಳ ಬೇಸಿಗೆ ರಜೆ ಹಿನ್ನೆಲೆ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ.ಕಾಂತಾರ ಸಿನಿಮಾ ನಂತರ ಕರಾವಳಿಯ ದೈವಾರಾಧನೆ ಬಗ್ಗೆ ದೇಶಾದ್ಯಂತ ಕುತೂಹಲ ಹೆಚ್ಚಾಗಿದೆ.

ದೈವ ಆರಾಧನೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಲು ಪ್ರವಾಸಿಗರು ಆಸಕ್ತಿ ತೋರುತ್ತಿದ್ದಾರೆ. ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ಪರಂಪರೆಗಳನ್ನು ಹತ್ತಿರದಿಂದ ನೋಡಲು ದೇಶದ ವಿವಿಧ ಭಾಗಗಳಿಂದ ಜನ ಆಗಮಿಸುತ್ತಿದ್ದಾರೆ.ಪ್ರವಾಸೋದ್ಯಮದ ಬೆಳವಣಿಗೆಯಿಂದ ಕರಾವಳಿಯ ಆರ್ಥಿಕ ಚಟುವಟಿಕೆಗೂ ಬಲ ಸಿಕ್ಕಿದೆ. ಹೋಟೆಲ್, ಹೋಂ ಸ್ಟೇ, ಸಾರಿಗೆ, ಮೀನುಗಾರಿಕೆ ಹಾಗೂ ಸಣ್ಣ ವ್ಯಾಪಾರ ವಹಿವಾಟುಗಳು ಚುರುಕುಗೊಂಡಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಆಶಾಭಾವ ಮೂಡಿದೆ.

ಧಾರ್ಮಿಕ ನಂಬಿಕೆ, ಪ್ರಕೃತಿ ಸೌಂದರ್ಯ ಕರಾವಳಿಯ ವೈಶಿಷ್ಟ್ಯಗಳ ಸಮನ್ವಯದಿಂದ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳು ದೇಶದ ಪ್ರಮುಖ ಪ್ರವಾಸಿ ತಾಣಗಳಾಗಿ ರೂಪುಗೊಳ್ಳುತ್ತಿವೆ. ಬೇಸಿಗೆ ರಜೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.