ಉಡುಪಿ : ಜಿಲ್ಲಾ ಮುಸ್ಲಿಂ ಒಕ್ಕೂಟದ ಸ್ನೇಹ ಸಮಾವೇಶದಲ್ಲಿ ಪ್ರಕಾಶ್ ರಾಜ್ಗೆ ಮಾನವ ರತ್ನ ಪ್ರಶಸ್ತಿ ನೀಡಲಾಯಿತು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿದರು. ಉಡುಪಿ ಮಿಷನ್ ಕಾಂಪೌಂಡ್ನ ಯುಬಿಎಂಸಿ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಿತು.
ಸಾಮಾಜಿಕ ಹೋರಾಟಗಾರ ಹಾಗೂ ನಟ ಪ್ರಕಾಶ್ ರಾಜ್ ಭಾಗಿಯಾಗಿದ್ದರು. ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಮಾಜಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಪ್ರಕಾಶ್ ರಾಜ್ ಹಾಗೂ ಗಣ್ಯರು ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರಿಂದ ಪ್ರಕಾಶ್ ರಾಜ್ಗೆ ಮಾನವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾನವ ರತ್ನ ಪ್ರಶಸ್ತಿ ಸ್ವೀಕರಿಸಿ ಸಾಮಾಜಿಕ ಹೋರಾಟಗಾರ ನಟ ಪ್ರಕಾಶ್ ರಾಜ್ ಮಾತನಾಡಿದರು. ನಟನೆ ನನ್ನ ವೃತ್ತಿ, ಆದರೆ ಸಮಾಜದ ಪರವಾಗಿ ತೆಗೆದುಕೊಳ್ಳುವ ನಿಲುವು ಬಹಳ ಮುಖ್ಯ. ಕಲಾವಿದನನ್ನು ಪ್ರೀತಿಯಿಂದ ಬೆಳೆಸಿದವರು ಸಮಾಜದ ಜನರು. ಜನರಿಗಾಗಿ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿ. ನಟನೆಗಿಂತ ಸಾಮಾಜಿಕ ನಿಲುವು ಮುಖ್ಯ ಎಂದು ಜನರೇ ಹೇಳುತ್ತಿದ್ದಾರೆ. ಕರಾವಳಿ ಸೌಹಾರ್ದತೆಯ ನೆಲ ಅಶಾಂತಿಯ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ. ಅಂಬೇಡ್ಕರ್ ರಚಿಸಿದ ಸಂವಿಧಾನದ ಮಹತ್ವವನ್ನು ಮೊದಲು ಅರಿತುಕೊಳ್ಳಬೇಕು ಎಂದರು.
ಅಸಮಾನತೆ, ಜಾತಿ ವ್ಯವಸ್ಥೆ ಹಾಗೂ ಮನುಸ್ಮೃತಿಯ ಮನೋಭಾವದ ವಿರುದ್ಧ ಹೋರಾಡಬೇಕಿದೆ. ಜಾತಿ, ಜನಾಂಗದ ಹೆಸರಿನಲ್ಲಿ ದ್ವೇಷ ಬಿತ್ತಿದ ಜನರನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಕೇವಲ ವೇದಿಕೆಯ ಕಾರ್ಯಕ್ರಮವಲ್ಲ, ಮಾನವೀಯ ಮೌಲ್ಯಗಳನ್ನು ಉಳಿಸುವ ಹೋರಾಟದ ಆರಂಭ. ಕರಾವಳಿಯ ಆರೋಗ್ಯ, ಆರ್ಥಿಕತೆ ಹಾಗೂ ಯುವಜನತೆಯ ಭವಿಷ್ಯ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರಾವಳಿಯ ಪ್ರತಿಯೊಂದು ಸಮಸ್ಯೆಯನ್ನೂ ಅಂಕಿ-ಅಂಶಗಳ ಸಮೇತ ಜನರ ಮುಂದಿಡುವ ಅಗತ್ಯವಿದೆ. ಸಂಘಟನೆಗಳ ಅಳಲು, ಜನರ ಸಮಸ್ಯೆ ಹಾಗೂ ಕರಾವಳಿಯ ವಾಸ್ತವ ಸ್ಥಿತಿಯನ್ನು ಆಳವಾಗಿ ಅಧ್ಯಯನ ಮಾಡುವ ಕರೆ ನೀಡಿದರು. ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆ ಜಿಲ್ಲೆಗಳಲ್ಲಿ ಜನರೊಂದಿಗೆ ಪ್ರವಾಸ ಮಾಡುವುದಾಗಿ ಪ್ರಕಾಶ್ ರಾಜ್ ಘೋಷಣೆ ಮಾಡಿದರು. ಉದ್ಯೋಗಕ್ಕಾಗಿ ಮನೆ, ಕುಟುಂಬ ತೊರೆದು ದುಬೈ ಸೇರಿದಂತೆ ವಿದೇಶಗಳಲ್ಲಿ ದುಡಿಯುತ್ತಿರುವ ಸಾವಿರಾರು ಯುವಕರು. ದಕ್ಷಿಣ ಕನ್ನಡದ ಯುವಜನತೆಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ.
ಯುವತಿಯರಿಗೂ ಸ್ಥಳೀಯವಾಗಿ ಸೂಕ್ತ ಉದ್ಯೋಗಾವಕಾಶಗಳ ಕೊರತೆ ಇದೆ. ಕರಾವಳಿಯ ಸಾಮಾಜಿಕ ಸಮಸ್ಯೆಗಳ ಕುರಿತು ಜನರೊಂದಿಗೆ ಪ್ರೀತಿಯಿಂದ ಸಂವಾದ ನಡೆಸುವ ಉದ್ದೇಶವಿದೆ. ಶಾಂತಿಯುತ ಪ್ರತಿಭಟನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಂಕಲ್ಪವಾಗಿದ್ದು, ಜನರನ್ನು ಒಗ್ಗೂಡಿಸಿ ಕರಾವಳಿ, ಕರ್ನಾಟಕ ಹಾಗೂ ದೇಶವನ್ನು ದೈತ್ಯ ಶಕ್ತಿಗಳಿಂದ ರಕ್ಷಿಸುವ ಹೋರಾಟವಿದೆ. ಒಂದೇ ದಿನದ ಭಾಷಣ ಅಥವಾ ಕಾರ್ಯಕ್ರಮಕ್ಕೆ ಸೀಮಿತವಾಗದೆ ನಿರಂತರ ಹೋರಾಟಕ್ಕೆ ಕರೆ ನೀಡಿದರು. ಸಹನೆ, ಒಗ್ಗಟ್ಟು ಮತ್ತು ನಿರಂತರ ಜನಸಂಪರ್ಕವೇ ಮುಂದಿನ ಹೋರಾಟದ ಮಾರ್ಗ ಎಂದು ಪ್ರಕಾಶ್ ರಾಜ್ ಹೇಳಿದರು.

