ಉಡುಪಿ: ಮಾನಸಿಕ ಅಸ್ವಸ್ಥ ಯುವಕನೊಬ್ಬ ತಡರಾತ್ರಿ ಉಗ್ರವಾಗಿ ವರ್ತಿಸಿ ದಾಂಧಲೆ ನಡೆಸಿದ ಪರಿಣಾಮ, ಗಾಢ ನಿದ್ರೆಯಲ್ಲಿದ್ದ ಸ್ಥಳೀಯರು ಆತಂಕಗೊಂಡ ಘಟನೆ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿಯ ಬಲಾಯಿಪಾದೆ ಬಳಿ ಸೋಮವಾರ ತಡರಾತ್ರಿ ನಡೆದಿದೆ.

ಮಂಗಳವಾರ ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ಚಂದ್ರಶೇಖರ್ ಮಾಲೀಕತ್ವದ ಟಯರ್ ರೀಸೋಲ್ ಅಂಗಡಿಯ ಬಳಿ ಬಂದ ಯುವಕ ಏಕಾಏಕಿ ದಾಂಧಲೆ ನಡೆಸಲಾರಂಭಿಸಿದ್ದಾನೆ. ಇದರಿಂದ ಪರಿಸರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ 112 ತುರ್ತು ಸಹಾಯವಾಹಿನಿಯ ಪೊಲೀಸರು ಹಾಗೂ ನಗರ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಸ್ಥಳಕ್ಕೆ ಕರೆಸಿಕೊಂಡು, ಯುವಕನನ್ನು ವಶಕ್ಕೆ ಪಡೆದು ಅವರ ಸುಪರ್ದಿಗೆ ಒಪ್ಪಿಸಿದರು.

ನಂತರ ನಿತ್ಯಾನಂದ ಒಳಕಾಡು ಅವರು ಆಂಬುಲೆನ್ಸ್ ಮೂಲಕ ಯುವಕನನ್ನು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ, ಚಿಕಿತ್ಸೆ ವ್ಯವಸ್ಥೆ ಮಾಡಿದರು. ಈ ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ಗಳಾದ ಪ್ರಸನ್ನ ಹಾಗೂ ಲೋಕೇಶ್ ಸಹಕರಿಸಿದರು.

ಯುವಕ ಕೇರಳ ಮೂಲದವನೆಂದು ತಿಳಿದುಬಂದಿದ್ದು, ಈ ಕುರಿತು ಆತನ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ವಿಷಯ ತಿಳಿದು ತಕ್ಷಣ ಉಡುಪಿಗೆ ಆಗಮಿಸಿದ ಹೆತ್ತವರಿಗೆ ಯುವಕನನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.

ಪೊಲೀಸರು ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಮಯಪ್ರಜ್ಞೆಯಿಂದ ಯುವಕನಿಗೆ ಸೂಕ್ತ ಚಿಕಿತ್ಸೆ ದೊರೆಯುವುದರ ಜತೆಗೆ, ಕುಟುಂಬದವರ ಮಡಿಲು ಸೇರುವಂತಾಯಿತು.