ಉಡುಪಿ: ಇಂದ್ರಾಳಿಯ ಇಂದ್ರಾಣಿ ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಸ್ಥಾನ ಸಮೀಪದಲ್ಲಿರುವ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗ ದೇವರ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಎ. 3ರಿಂದ ಎ. 7ರ ವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಬುಧವಾರ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಶ್ರೀಕೃಷ್ಣಮಠದ ರಾಜಾಂಗಣದ ಎದುರಿನಲ್ಲಿ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶೋಭಾಯಾತ್ರೆಗೆ ಚಾಲನೆ ನೀಡಿ, ಆಶೀರ್ವದಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಇಂದ್ರಾಣಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಕುಶಲ ಶೆಟ್ಟಿ,

ಪ್ರಮುಖರಾದ ಪುರುಷೋತ್ತಮ ಪಿ. ಶೆಟ್ಟಿ ಶ್ರೀನಾಗೇಶ್ ಹೆಗ್ಡೆ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್ ಮಂಚಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸಾಧು ಶೆಟ್ಟಿ ಪ್ರ.ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ, ಅರ್ಚಕರಾದ ಪ್ರಧ್ಯುಮ್ನ ಭಟ್, ಯೋಗೀಶ್ ಭಟ್, ಸಮಿತಿಯ ಹರಿಶ್ಚಂದ್ರ ನಾಯಕ್, ರಾಜೇಶ್ ನಾಯಕ್, ಮಧುಕರ ಶೆಣೈ, ಸಮಿತಿಗಳ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.

ದೇವರಿಗೆ ಸಮರ್ಪಿಸಲ್ಪಡುವ ಪ್ರಭಾವಳಿ, ಬೃಹದಾಕಾರದ ಘಂಟೆ, ಜಾಗಟೆ, ನಂದಾದೀಪ, ಚಿನ್ನದ ದೃಷ್ಟಿ ಆಂಜನೇಯ ಮತ್ತು ಮುಖ್ಯಪ್ರಾಣ ದೇವರ ಪ್ರತಿಕೃತಿ, 200ಕ್ಕೂ ಮಿಕ್ಕಿ ಕುಂಭ ಕಲಶ ಹಿಡಿದ ಮಹಿಳೆಯರು, ಕುಣಿತ ಭಜನೆ, ಹಾಸ್ಯ ಗೊಂಬೆಗಳು, ಯಕ್ಷಗಾನ ವೇಷಗಳು, ಕೀಲು ಕುದುರೆ, ಹುಲಿವೇಷಧಾರಿಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

View this post on Instagram

A post shared by News Karnataka (@newskarnataka)