ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಐತಿಹಾಸಿಕ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿಯಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವವು ಬುಧವಾರ ರಾತ್ರಿ ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಜ್ರಾಭರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ವಿಶೇಷವಾಗಿ ಅಲಂಕೃತಗೊಂಡ ಶ್ರೀ ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ಕಪಿಲಾ ನದಿಯ ಸ್ನಾನಘಟ್ಟದ ಬಳಿ ಇರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಮಂಗಳ ವಾದ್ಯಗಳೊಂದಿಗೆ ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ತೇಲುವ ದೇವಾಲಯದ ಮಾದರಿಯಲ್ಲಿದ್ದ ಯಾಂತ್ರಿಕ ದೋಣಿಯಲ್ಲಿ ಕೂರಿಸಿ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಲಾಯಿತು.

ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ಪೂರ್ವ ಪಶ್ಚಿಮಾಭಿಮುಖವಾಗಿ ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ, ಈ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ ಭಕ್ತರು ತಮ್ಮ ಭಕ್ತಿ-ಭಾವ ಮೆರೆದರು. ಇದೇ ಸಂದರ್ಭದಲ್ಲಿ ಕಪಿಲಾ ನದಿಯ ಮತ್ತೊಂದು ದಡದಲ್ಲಿ ಹೆಜ್ಜಿಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಮಾಯಿಸಿ ಚಿತ್ತಾಕರ್ಷಕವಾದ ಬಾಣ ಬಿರುಸು ಪಟಾಕಿಗಳನ್ನು ಸಿಡಿಸುವ ಮೂಲಕ ಸಂಭ್ರಮಿಸಿದರು.

ತೆಪ್ಪೋತ್ಸವ ಮುಗಿದ ಬಳಿಕ ಉತ್ಸವ ಮೂರ್ತಿಗಳನ್ನು ತಂದು ನಂಜನಗೂಡು ಪಟ್ಟಣದ ರಥ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ನೆರೆದಿದ್ದ ಭಕ್ತರು ಪೂಜಾ ಸಾಮಗ್ರಿಗಳೊಂದಿಗೆ ಪೂಜೆ ಸಲ್ಲಿಸಿ ಭಕ್ತಿ ನಮನ ಸಲ್ಲಿಸಿದರು.