ಉಡುಪಿ : ಆದಿಮ ಕಲಾ ಟ್ರಸ್ಟ್ (ರಿ.), ಉಡುಪಿ, ತನ್ನ ಮೊದಲ ವಾರ್ಷಿಕೋತ್ಸವದ ಸವಿನೆನಪಿಗಾಗಿ ಪ್ರಖ್ಯಾತ ಭಾರತೀಯ ಪುರಾತತ್ವ ವಿದ್ವಾಂಸ ಡಾ. ರವೀಂದ್ರ ಕೋರಿಸೆಟ್ಟರ್ ರವರಿಗೆ, ಆದಿಮ ಕಲಾ ರತ್ನ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಅತ್ಯಂತ ಸಂತೋಷ ಮತ್ತು ಸಂಭ್ರಮದಿಂದ ಕೊಡಮಾಡುತ್ತಿದೆ. ಈ ಪ್ರಶಸ್ತಿಯು ರೂ.25.000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.

ನಮ್ಮ ನಡುವಿನ ಅಂತರಾಷ್ಟ್ರೀಯ ಖ್ಯಾತಿಯ ಪುರಾತತ್ವ ವಿದ್ವಾಂಸ ಡಾ. ರವೀಂದ್ರ ಕೋರಿಸೆಟ್ಟರ್, ರವಿ ಕೋರಿಸೆಟ್ಟರ್ ಎಂದೇ ಜನಜನಿತವಾಗಿರುವ ಹೆಮ್ಮೆಯ ಕನ್ನಡಿಗ. ದೇಶವ್ಯಾಪಿ ಪುರಾತತ್ವ ವ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ರವಿ ಕೋರಿಸೆಟ್ಟರ್ ದಣಿವರಿಯದ ಯುವಕ. 1952 ರಲ್ಲಿ ಕೆ.ಎಸ್. ಮರಿಸ್ವಾಮಿ ಮತ್ತು ಶಾರದಾ ದಂಪತಿಗಳ ಸುಪುತ್ರರಾಗಿ 1952 ರ ಜುಲೈ 8 ರಂದು ಹೊಸಪೇಟೆಯಲ್ಲಿ ಜನ್ಮತಾಳಿದರು.

ನಂತರ ಅವರ ಬಾಳಸಂಗಾತಿಯಾಗಿ ಬಂದ ಶ್ರೀಮತಿ ವಿಶಾಲಾಕ್ಷಿ ಕೋರಿಸೆಟ್ಟರ್ ರವರ ದಾಂಪತ್ಯದ ಫಲವಾಗಿ ಪೂಜಾ ಮತ್ತು ಶಾಶ್ವತ್ ಎಂಬ ಇಬ್ಬರು ಮಕ್ಕಳು ಅವರ ಕುಟುಂಬದ ಬೆಳಕಾದರು. ಡೆಕ್ಕನ್ ಕಾಲೇಜು, ಪೂನಾ ದಲ್ಲಿ ತಮ್ಮ ಸ್ನಾತಕೋತ್ತರ ಮತ್ತು ಪಿ.ಹೆಚ್‌ಡಿ, ಪದವಿಯನ್ನು ಗಳಿಸಿದ ಕೋರಿಸೆಟ್ಟರ್ ರವರು, ಧಾರವಾಡ ದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪುರಾತತ್ವ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.

ನಿವೃತ್ತಿಯ ನಂತರವೂ ವಿವಿಧ ಅಧ್ಯಯನ ಪೀಠಗಳ ಮುಖ್ಯಸ್ಥರಾಗಿ, ಪ್ರಸ್ತುತ ಬೆಂಗಳೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಗನಕಲ್ಲು ಉತ್ಖನನ ಅವರ ಬಹುಮುಖ್ಯ ಕೊಡುಗೆಗಳಲ್ಲಿ ಒಂದು. ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಪುರಾತತ್ವ ವಸ್ತು ಸಂಗ್ರಹಾಲಯ ಅವರ ಕನಸಿನ ಕೂಸು.