ಮಂಗಳೂರು : ಉತ್ಪಾದನೆ ಕೊರತೆ ಎದುರಿಸುತ್ತಿರುವ ರಬ್ಬರ್ ಬೆಳೆಯ ಧಾರಣೆ ದಿನದಿಂದ ದಿನಕ್ಕೆ ಏರಿಕೆ ಕಂಡಿದೆ. ರಬ್ಬರ್ ಖರೀದಿ ಸಂಸ್ಥೆಗಳು ಧಾರಣೆ ಏರಿಕೆ ಖರೀದಿಗೆ ಮುಂದಾಗುತ್ತಿದ್ದರೂ ಪೂರೈಕೆ ಮಾತ್ರ ಇಳಿಕೆ ಹಾದಿಯಲ್ಲೇ ಸಾಗಿದೆ.
ಫೆ. 19ರಂದು ಮಾರುಕಟ್ಟೆಯಲ್ಲಿ ರಬ್ಬರ್ ಗ್ರೇಡ್ಗೆ 210.5 ರೂ. ಇತ್ತು. ರಬ್ಬರ್ ಸ್ಕ್ಯಾಪ್ಗೆ 133 ರೂ. ಇತ್ತು. ವಾರದ ಹಿಂದೆ ಅಂದರೆ ಫೆ.12ರಂದು ರಬ್ಬರ್ ಗ್ರೇಡ್ ಗೆ 205 ರೂ., ರಬ್ಬರ್ ಟ್ರ್ಯಾಪ್ಗೆ 129 ರೂ. ಇತ್ತು. ವಾರದೊಳಗೆ ಧಾರಣೆ 5 ರೂ.ನಷ್ಟು ಹೆಚ್ಚಳ ಕಂಡಿದೆ. ಸದ್ಯದಲ್ಲಿ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯನ್ನು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಹವಾಮಾನ ಬದಲಾವಣೆ ಕಾರಣದಿಂದ ಉತ್ಪಾದನೆ ಕುಸಿದಿರುವುದು ಕೂಡ ಧಾರಣೆ ಏರಿಕೆಗೆ ಮುಖ್ಯ ಕಾರಣಗಳಲ್ಲಿ ಒಂದು. ಇನ್ನೊಂದೆಡೆ ಕರಾವಳಿಯ ನಾನಾ ಭಾಗದಲ್ಲಿ ರಬ್ಬರ್ ಮರ ಕಡಿದು ಅಡಿಕೆ ಸಹಿತ ಇನ್ನಿತ್ತರ ಕೃಷಿಯತ್ತ ಜನರು ಮುಖ ಮಾಡಿರುವುದರಿಂದ ನಿರೀಕ್ಷಿತ ಉತ್ಪಾದನ ಪ್ರಮಾಣವೂ ಕುಸಿದಿದೆ. ಈ ಎಲ್ಲದರ ಪರಿಣಾಮ ರಬ್ಬರ್ ಆಧಾರಿತ ಉತ್ಪಾದನ ವಲಯಗಳಿಂದ ರಬ್ಬರ್ಗೆ ಬೇಡಿಕೆ ಸೃಷ್ಟಿಯಾಗಿದೆ. ಆದರೆ ಬೇಡಿಕೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಸಹಜವಾಗಿ ಬೆಲೆ ಏರಿಕೆ ಕಂಡಿದೆ.
ಕಳೆದ ಬಾರಿ ಬೇಸಗೆಯಲ್ಲಿ ನಿರೀಕ್ಷೆಗೆ ಮೀರಿ ಮಳೆ ಬಂದಿತ್ತು. ಇದರಿಂದ ರಬ್ಬರ್ ಮರಗಳಿಗೆ ಪ್ಲಾಸ್ಟಿಕ್ ಹೊದಿಸಲು ಅಸಾಧ್ಯವಾಗಿತ್ತು. ಹೀಗಾಗಿ ಹವಾಮಾನ ವ್ಯತ್ಯಾಸದ ಪರಿಣಾಮ ರಬ್ಬರ್ ನಲ್ಲಿ ನಿರೀಕ್ಷಿತ ಫಸಲು ಸಿಕ್ಕಿಲ್ಲ. ಇದರಿಂದ ಕೊರತೆ ಉಂಟಾಗಿದೆ ಎಂದು ಕೃಷಿಕರ ಅಭಿಪ್ರಾಯ.

