ಉಡುಪಿ: ಅರಬ್ಬಿ ಸಮುದ್ರದ ಅಬ್ಬರದಿಂದ ಉಡುಪಿ ಕರಾವಳಿಯ ಹಲವು ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ತೀರ ಪ್ರದೇಶದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಪ್ರತಿ ವರ್ಷ ತಾತ್ಕಾಲಿಕ ಕಾಮಗಾರಿಗಳಿಗೆ ಸೀಮಿತವಾಗದೆ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯ ಕರಾವಳಿ ತೀರದ ಅನೇಕ ಕುಟುಂಬಗಳು ಮೀನುಗಾರಿಕೆ ಹಾಗೂ ತೆಂಗಿನ ತೋಟಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿವೆ. ಆದರೆ ಕಳೆದ ಕೆಲವು ವರ್ಷಗಳಿಂದ ಸಮುದ್ರದ ಅಬ್ಬರ ಹೆಚ್ಚಾಗುತ್ತಿದ್ದು, ತೀರ ಪ್ರದೇಶದ ಭೂಭಾಗವನ್ನು ಸಮುದ್ರ ತನ್ನೊಳಗೆ ಸೆಳೆದುಕೊಳ್ಳುತ್ತಿದೆ. ತೆಂಗಿನ ತೋಟಗಳು, ಮೀನುಗಾರಿಕಾ ರಸ್ತೆಗಳು ಸೇರಿದಂತೆ ಹಲವು ಪ್ರದೇಶಗಳು ಕಡಲ್ಕೊರೆತದಿಂದ ಹಾನಿಗೀಡಾಗುತ್ತಿವೆ.
ಪ್ರತಿ ಮಳೆಗಾಲದಲ್ಲೂ ಜಿಲ್ಲೆಯ ಕರಾವಳಿ ವ್ಯಾಪ್ತಿಯ ಒಂದಿಲ್ಲೊಂದು ಪ್ರದೇಶದಲ್ಲಿ ಕಡಲ್ಕೊರೆತ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಪಡುಬಿದ್ರಿ, ಮಟ್ಟು ಹಾಗೂ ಕಾಪು ಭಾಗಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ.
ಕಡಲ್ಕೊರೆತ ತಡೆಯಲು ಸಾಮಾನ್ಯವಾಗಿ ಸಮುದ್ರ ತೀರದಲ್ಲಿ ಬಂಡೆಗಲ್ಲುಗಳನ್ನು ಸುರಿಯುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಬಾರಿಯೂ ಹಲವು ಕಡೆ ಬಂಡೆಗಲ್ಲು ಸುರಿದು ತಾತ್ಕಾಲಿಕವಾಗಿ ಸಮುದ್ರದ ಅಬ್ಬರ ನಿಯಂತ್ರಿಸುವ ಪ್ರಯತ್ನ ನಡೆಸಲಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಸಮುದ್ರಕ್ಕೆ ಸುರಿಯುವ ಬಂಡೆಗಲ್ಲುಗಳು ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗುತ್ತಿದ್ದು, ಸರ್ಕಾರದ ಹಣ ವ್ಯರ್ಥವಾಗುತ್ತಿದೆ. ಇಂತಹ ತಾತ್ಕಾಲಿಕ ಕ್ರಮಗಳಿಂದ ತೀರವಾಸಿಗಳಿಗೆ ಯಾವುದೇ ಶಾಶ್ವತ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕಡಲ್ಕೊರೆತ ಸಮಸ್ಯೆಗೆ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮಗ್ರ ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೆ ಅಗತ್ಯ ನೆರವು ಒದಗಿಸಲು ಮನವಿ ಮಾಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಡಲ್ಕೊರೆತದಿಂದ ಸಂಕಷ್ಟದಲ್ಲಿರುವ ತೀರವಾಸಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸಮಗ್ರ ಕಾರ್ಯಯೋಜನೆ ರೂಪಿಸಬೇಕು. ಪ್ರತಿ ವರ್ಷ ತಾತ್ಕಾಲಿಕ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಬದಲು ಶಾಶ್ವತ ಪರಿಹಾರದತ್ತ ಸರ್ಕಾರಗಳು ಗಮನಹರಿಸಬೇಕು ಎಂಬುದು ಕರಾವಳಿ ನಿವಾಸಿಗಳ ಒತ್ತಾಯವಾಗಿದೆ.

