ಮಂಗಳೂರು: SIR ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ವಿದೇಶದಲ್ಲಿರುವ ಅನಿವಾಸಿ ಮತದಾರರು ಖುದ್ದಾಗಿ ERO ಮುಂದೆ ಹಾಜರಾಗಬೇಕು ಎಂಬ ಚುನಾವಣಾ ಆಯೋಗದ ನಿರ್ದೇಶನವು SIR ಹೆಸರಿನಲ್ಲಿ ಚುನಾವಣಾ ಆಯೋಗ ಮತದಾನದ ಹಕ್ಕಿಗೆ ಅಡ್ಡಿಪಡಿಸುವ ಯತ್ನವಾಗಿದೆ ಎಂದು SDPI ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಶ್ರಫ್ ಅಡ್ಡೂರುರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದೇಶದಲ್ಲಿ ಉದ್ಯೋಗ, ವ್ಯಾಪಾರ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ನೆಲೆಸಿರುವ ಮತದಾರರು ಕೇವಲ ವಿಚಾರಣೆಗೆ ಹಾಜರಾಗಲು ಭಾರತಕ್ಕೆ ಆಗಮಿಸುವುದು ಪ್ರಾಯೋಗಿಕವಾಗಿ ಕಷ್ಟಕರವಾಗಿದ್ದು, ಇದು ಅರ್ಹ ಮತದಾರರ ಮತದಾನದ ಹಕ್ಕಿನ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತಿಳಿಸಿದೆ.

SIR ಪ್ರಕ್ರಿಯೆಯ ಆರಂಭದಲ್ಲಿ ಜನರಿಗೆ ಅಗತ್ಯ ದಾಖಲೆಗಳನ್ನು ಸುಲಭವಾಗಿ ಒದಗಿಸುವುದಾಗಿ ಹಾಗೂ ವಾಸಸ್ಥಳ ದೃಢೀಕರಣ ಸೇರಿದಂತೆ ಅಗತ್ಯ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ಒಂದೆಡೆ ಸರ್ಕಾರ ಮನೆಬಾಗಿಲಿಗೆ ಸೇವೆ ನೀಡುವ ಭರವಸೆ ನೀಡುತ್ತಿದ್ದರೆ, ಮತ್ತೊಂದೆಡೆ NRI ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾವಿರಾರು ಕಿಲೋಮೀಟರ್ ದೂರದಿಂದ ಭಾರತಕ್ಕೆ ಬಂದು ERO ಮುಂದೆ ಖುದ್ದಾಗಿ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು SDPI ಆರೋಪಿಸಿದೆ.

NRI ಮತದಾರರ ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸಿ ರಾಜ್ಯ ಚುನಾವಣಾ ಆಯೋಗವು ಈ ಭೌತಿಕ ಹಾಜರಾತಿ ಕುರಿತ ನಿರ್ದೇಶನವನ್ನು ಮರುಪರಿಶೀಲಿಸಬೇಕು. ವಿದೇಶದಲ್ಲಿರುವ ಮತದಾರರಿಗೆ ಆನ್‌ಲೈನ್ ಅಥವಾ ಕಾನೂನುಬದ್ಧವಾಗಿ ಸಾಧ್ಯವಿರುವ ಇತರ ಪರ್ಯಾಯ ವಿಧಾನಗಳ ಮೂಲಕ ದಾಖಲೆಗಳು ಮತ್ತು ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು.

ಅದೇ ರೀತಿ Online ನಲ್ಲಿ ಎಪಿಕ್ ನಂಬರ್ ಗೆ ಮೊಬೈಲ್ ನಂಬರ್ ನೋಂದಣಿ ಆಗದವರಿಗೂ ದಾಖಲೆಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಹಾಗೂ Online ನಲ್ಲಿ ದಾಖಲೆಗಳನ್ನು ಸಲ್ಲಿಸಿದವರಿಗೆ ಭೌತಿಕವಾಗಿ ಹಾಜರಾಗಬೇಕೆಂಬ ನಿಯಮಗಳನ್ನು ಕೈಬಿಡಬೇಕು.

ಅದೇ ರೀತಿ, SIR ಪ್ರಕ್ರಿಯೆಯಲ್ಲಿ NRI ಮತದಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಸ್ಪಷ್ಟ ಪರಿಹಾರ ಒದಗಿಸಬೇಕು. ಸರ್ಕಾರದ ಘೋಷಣೆಗಳು ಕೇವಲ ಹೇಳಿಕೆಗಳಾಗಿ ಉಳಿಯದೆ, ತಲಮಟ್ಟದಲ್ಲಿ ಮತದಾರರಿಗೆ ನೈಜ ಸಹಾಯವಾಗಿ ಪರಿವರ್ತನೆಯಾಗಬೇಕು.

ಒಬ್ಬ ಅರ್ಹ NRI ಮತದಾರನೂ ಕೇವಲ ಭೌತಿಕ ಹಾಜರಾತಿಯ ಕಾರಣದಿಂದ ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು. ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಶ್ರಫ್ ಅಡ್ಡೂರು ಆಗ್ರಹಿಸಿದ್ದಾರೆ‌.