ಉಡುಪಿ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜಂಕ್ ಫುಡ್ ಬಳಕೆಯಿಂದ ಉಂಟಾಗುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಪರ್ಯಾಯವಾಗಿ ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳನ್ನು ದಿನನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ‘ಸಿರಿಧಾನ್ಯ ಹಬ್ಬ’ ಭಾನುವಾರ ಮಣಿಪಾಲದ ರಜತಾದ್ರಿಯಲ್ಲಿ ಸಂಭ್ರಮದಿಂದ ಜರುಗಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಪೌಷ್ಠಿಕ ಅಭಿಯಾನದ ಅಡಿಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಸಿದ್ಧಪಡಿಸಲಾದ ಸಿರಿಧಾನ್ಯ ಹಾಗೂ ವಿವಿಧ ಕೃಷಿ ಉತ್ಪನ್ನಗಳ ಪ್ರದರ್ಶನ ಮಳಿಗೆಗಳನ್ನು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೈತರು ಬೆಳೆದ ರಾಗಿ, ನವಣೆ ಸೇರಿದಂತೆ ವಿವಿಧ ಸಿರಿಧಾನ್ಯಗಳು ಹಾಗೂ ಎಣ್ಣೆಕಾಳು ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಅವರು ಮಾಹಿತಿ ಪಡೆದರು.

ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ, “ಇತ್ತೀಚಿನ ದಿನಗಳಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಕೊಡುಗೆ ಕೇವಲ 17 ರಿಂದ 18 ಪ್ರತಿಶತಕ್ಕೆ ಕುಸಿದಿರುವುದು ಆತಂಕಕಾರಿ ವಿಚಾರ. ಕೃಷಿ ಕ್ಷೇತ್ರದಲ್ಲಿ ಆಧುನಿಕ ತಾಂತ್ರಿಕತೆ ಮತ್ತು ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ಮೂಲಕ ಯುವಜನರನ್ನು ಈ ಕ್ಷೇತ್ರದತ್ತ ಸೆಳೆಯುವುದು ಇಂದಿನ ತುರ್ತು ಅಗತ್ಯವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪ್ರದೀಪ್ ಹೆಬ್ಬಾರ್ ಅವರು ಮಾತನಾಡಿ, ಜಾಗತಿಕ ಮಟ್ಟದಲ್ಲಿ ಯುದ್ಧದಂತಹ ಪರಿಸ್ಥಿತಿಗಳಿದ್ದರೂ ಭಾರತೀಯ ರೈತರು ತಮ್ಮ ಸ್ವಾವಲಂಬಿ ಜೀವನಶೈಲಿಯಿಂದಾಗಿ ಸುಭದ್ರವಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

ತಜ್ಞರಿಂದ ಸಿರಿಧಾನ್ಯಗಳ ಪೌಷ್ಠಿಕ ಮೌಲ್ಯ ಮತ್ತು ಆಧುನಿಕ ಕೃಷಿ ತಂತ್ರಜ್ಞಾನದ ಬಗ್ಗೆ ಉಪನ್ಯಾಸಗಳು ನಡೆದವು. ಒಟ್ಟಾರೆಯಾಗಿ, ಅಕ್ಕಿ ಮತ್ತು ಗೋಧಿಗೆ ಪರ್ಯಾಯವಾಗಿ ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಕೃಷಿಕರು ಹೇಗೆ ಆರ್ಥಿಕ ಲಾಭ ಪಡೆಯಬಹುದು ಎಂಬ ಅಮೂಲ್ಯ ಮಾಹಿತಿಗಳನ್ನು ಈ ಹಬ್ಬದ ಮೂಲಕ ಹಂಚಿಕೊಳ್ಳಲಾಯಿತು.

View this post on Instagram

A post shared by News Karnataka (@newskarnataka)