ಉಡುಪಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರಕಾರವು ಮಹಿಳಾ ಮಸೂದೆಯನ್ನು ನೆಪವಾಗಿಟ್ಟುಕೊಂಡು ಕ್ಷೇತ್ರ ಪುನರ್ ವಿಂಗಡಣೆ ಬಿಲ್ ಅನ್ನು ಜಾರಿಗೆ ತರಲು ಹೊರಟಿತ್ತು. ಆದರೆ ಅವರು ಕುತಂತ್ರದಿಂದ ಜಾರಿಗೆ ತರಲು ಹೊರಟಿದ್ದ ಕ್ಷೇತ್ರ ಪುನರ್ ವಿಂಗಡಣೆಯ ಬಿಲ್ ಗೆ ಸೋಲಾಗಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ‌ ನರೇಂದ್ರ ಮೋದಿಯವರಿಗೆ ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ಕೊಡುವ ಮನಸ್ಸು ಇಲ್ಲ. ಅವರಿಗೆ ಮಹಿಳಾ ಮಸೂದೆಯನ್ನು ಜಾರಿಗೆ ತರುವ ಮನಸ್ಸಿದ್ದರೆ 2014 ಮತ್ತು‌ 2019ರಲ್ಲಿ ಅವರ ಬಹುಮತದ ಸರಕಾರವಿತ್ತು. ಆಗಲೇ ಈ ಮಸೂದೆಯನ್ನು ಜಾರಿಗೊಳಿಸುತ್ತಿದ್ದರು ಎಂದು ಟೀಕಿಸಿದರು.

2023ರಲ್ಲಿ ಕಾಂಗ್ರೆಸ್ ಸಂಪೂರ್ಣ ಬೆಂಬಲದಿಂದ ಶೇ. 33ರಷ್ಟು ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಪಾಸಾಗಿತ್ತು. ಅದರಂತೆ 543 ಸದಸ್ಯ ಬಲ ಹೊಂದಿರುವ ಲೋಕಸಭೆಯಲ್ಲಿ ಶೇ. 33ರಷ್ಟು ಮೀಸಲಾತಿಯ ಪ್ರಕಾರ 181 ಸ್ಥಾನಗಳನ್ನು ಮಹಿಳೆಯರಿಗೆ ಮೊದಲು ನೀಡಿ ಎಂದು ಅವರು ಆಗ್ರಹಿಸಿದರು.

2011ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡನೆ ಮಾಡಿ ಉತ್ತರದ ಕೆಲವೇ ರಾಜ್ಯಗಳಿಂದ ಕೇಂದ್ರ ಸರ್ಕಾರವನ್ನು ರಚಿಸಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಹೊರಟ ಬಿಜೆಪಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಈ ಮಸೂದೆಗೆ ಪೂರಕವಾಗುವಷ್ಟು ಮತದ ಕೊರತೆ ಇದೆ ಎಂಬುವುದು ಬಿಜೆಪಿಗೆ ಮೊದಲೇ ತಿಳಿದಿತ್ತು. ಆದರೂ ಮಹಿಳಾ ಮೀಸಲಾತಿಯ ಸೋಗಿನಲ್ಲಿ ಕ್ಷೇತ್ರ ಪುನರ್ವಿಂಗಡನೆ ಮಾಡಿ ಮುಂದಿನ ಚುನಾವಣೆಯಲ್ಲಿ ಕೆಲವೇ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡಿ ತನ್ನ ಸರ್ಕಾರವನ್ನು ಭದ್ರ ಮಾಡಿಕೊಳ್ಳಲು ಹೊರಟ ಬಿಜೆಪಿಗೆ ಸೋಲಾಗಿದೆ. ಸಂವಿಧಾನಕ್ಕೆ ಜಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ, ಮಹಿಳಾ ನಾಯಕಿಯರಾದ ಗೀತಾ ವಾಗ್ಳೆ, ಭಾನು ಭಾಸ್ಕರ್, ಅನಿತಾ ಡಿಸೋಜಾ, ಮೀನಾಕ್ಷಿ ಮಾಧವ ಬನ್ನಂಜೆ, ಶೋಭಾ ನಾಯ್ಕ್ ಇದ್ದರು.