ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2025–26ನೇ ಸಾಲಿನಲ್ಲಿ ₹15.09 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.
ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆದ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು.
ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸೊಸೈಟಿ 22,869 ಸದಸ್ಯರನ್ನು ಹೊಂದಿದ್ದು, ₹4.89 ಕೋಟಿ ಪಾಲು ಬಂಡವಾಳ ಹಾಗೂ ₹658.80 ಕೋಟಿ ಠೇವಣಿ ಸಂಗ್ರಹಿಸಿದೆ. ₹533.96 ಕೋಟಿ ಹೊರಬಾಕಿ ಸಾಲವಿದ್ದು, 2025–26ನೇ ಸಾಲಿನಲ್ಲಿ ಸುಮಾರು ₹4,089 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ ಎಂದು ತಿಳಿಸಿದರು.
ಸತತ ಎರಡು ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ಒಂಬತ್ತು ಬಾರಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಸೊಸೈಟಿಗೆ, 2025–26ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಾಧನಾ ಪ್ರಶಸ್ತಿ ಲಭಿಸಿದೆ. ಇದು ಸೊಸೈಟಿಗೆ ದೊರೆತ ಸತತ 20ನೇ ಜಿಲ್ಲಾ ಪ್ರಶಸ್ತಿಯಾಗಿದೆ.
ಅದೇ ರೀತಿ, 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಸೊಸೈಟಿಗೆ ‘ಸಹಕಾರ ಮಾಣಿಕ್ಯ’ ಪ್ರಶಸ್ತಿ ಲಭಿಸಿದ್ದು, ನಗದು ಬಹುಮಾನ ಹಾಗೂ 5 ಗ್ರಾಂ ಬಂಗಾರದ ಪದಕ ದೊರೆತಿದೆ. ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘವಾಗಿ ಈ ಪ್ರಶಸ್ತಿಗೆ ಪಾತ್ರವಾಗಿರುವುದು ಹೆಗ್ಗಳಿಕೆ ಎಂದು ತಿಳಿಸಿದರು.
ಐವರು ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಐವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಫ್ಯಾಷನ್ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಬಾಲಪ್ರತಿಭೆ ಸಚಿತ ರಾವ್, ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ರಾಷ್ಟ್ರೀಯ ವೇದಿಕೆಯಲ್ಲಿ ಉಡುಪಿಯನ್ನು ಪ್ರತಿನಿಧಿಸಿದ ಮೊದಲ ಯುವತಿ ಸ್ಫೂರ್ತಿ ಡಿ. ಶೆಟ್ಟಿ, ಸತತ 25 ಗಂಟೆಗಳ ಕಾಲ 200ಕ್ಕೂ ಅಧಿಕ ದಾಸರ ಪದಗಳನ್ನು ಪ್ರಸ್ತುತಪಡಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲೆ ನಿರ್ಮಿಸಿದ ವಿದುಷಿ ಸಂಗೀತ ಬಾಲಚಂದ್ರ, ಸ್ವಾವಲಂಬನೆಯ ಮೂಲಕ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಸುಗುಣಾ ಪೈ ಟಿ. ಹಾಗೂ ಪವರ್ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ನಲ್ಲಿ ಜಿಲ್ಲಾ, ರಾಜ್ಯ, ವಿಶ್ವವಿದ್ಯಾಲಯ ಹಾಗೂ ದಕ್ಷಿಣ ಭಾರತ ಮಟ್ಟದಲ್ಲಿ ಸಾಧನೆ ಮಾಡಿದ ಆ್ಯನ್ನಿ ಲಿಸಾ ಅಮ್ಮನ್ನ ಅವರನ್ನು ಗೌರವಿಸಲಾಯಿತು.
ಸೊಸೈಟಿಯ ಮಲ್ಪೆ ಶಾಖೆಯಲ್ಲಿ ಸುಮಾರು 11 ವರ್ಷ ದೈನಿಕ ಠೇವಣಿ ಸಂಗ್ರಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗೋವಿಂದಾಸ್ ಕೆ. ಸುವರ್ಣ ಅವರನ್ನು ಬೀಳ್ಕೊಡಲಾಯಿತು.
ಡಿಜಿಟಲೀಕರಣಕ್ಕೆ ಆದ್ಯತೆ:
ಸೊಸೈಟಿಯ ಡಿಜಿಟಲೀಕರಣದ ಭಾಗವಾಗಿ ಸುರಕ್ಷಿತ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುವ ಉದ್ದೇಶದಿಂದ ಅಗತ್ಯ ಭದ್ರತಾ ಕ್ರಮಗಳೊಂದಿಗೆ ‘ಚೇತನಾ’ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ದೈನಿಕ ಠೇವಣಿ ಸಂಗ್ರಹಣೆಯನ್ನೂ ‘ಪಿಗ್ಮಿ’ ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬ್ಯಾಂಕಿಂಗ್ ವ್ಯವಹಾರಕ್ಕೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಿಗೂ ಸೊಸೈಟಿ ಆದ್ಯತೆ ನೀಡುತ್ತಿದ್ದು, ವಾರ್ಷಿಕವಾಗಿ ಸುಮಾರು ₹30 ಲಕ್ಷವನ್ನು ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದರು.
ಸದಸ್ಯರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್, ಉಚಿತ ಮಿಸ್ಡ್ ಕಾಲ್ ಮತ್ತು ಎಸ್ಎಂಎಸ್ ಸೇವೆ, ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್ಫರ್, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್ ಹಾಗೂ ವಿವಿಧ ವಿಮಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್, ಎಲ್. ಉಮಾನಾಥ, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ., ಪದ್ಮನಾಭ ಕೆ. ನಾಯಕ್, ಸದಾಶಿವ ನಾಯ್ಕ್, ಮನೋಹರ್ ಎಸ್. ಶೆಟ್ಟಿ, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರಿ ಎಸ್. ಭಟ್ ಉಪಸ್ಥಿತರಿದ್ದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು.

