ಮಂಗಳೂರು: ಕದ್ರಿ ಮಾರ್ಕೆಟ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ಕೊಂಕಣ್ ಕ್ಯಾಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತದ ಪ್ರಧಾನ ಶಾಖೆಯ ಉದ್ಘಾಟನಾ ಸಮಾರಂಭ ಸೆ.13ರಂದು ಭಾನುವಾರ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.

ಕದ್ರಿ ಮಾರ್ಕೆಟ್‌ನ ಕಚೇರಿ ಸಂಖ್ಯೆ 01 ಮತ್ತು 02ರಲ್ಲಿ ನಡೆದ ಸಮಾರಂಭವನ್ನು ಡಿ.ಕೆ. ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ, ಡಿ.ಕೆ. ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ಸ್ ನಿಧಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆಲ್ವಿನ್ ಜೋಯಲ್ ನೊರೊನ್ಹಾ ಹಾಗೂ ಸಿ.ಒ.ಡಿ.ಪಿ. ನಿರ್ದೇಶಕ ರೆ| ಫಾ| ವಿನ್ಸೆಂಟ್ ಡಿಸೋಜಾ ಉದ್ಘಾಟಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ರೆ| ಫಾ| ಬೊನಾವೆಂಚರ್ ನಜರತ್ ಅವರು ಆಶೀರ್ವಚನ ನೀಡಿ, ಸಂಸ್ಥೆಯ ನೂತನ ಶಾಖೆಯು ಜನಸಾಮಾನ್ಯರಿಗೆ ಉತ್ತಮ ಹಣಕಾಸು ಸೇವೆಗಳನ್ನು ಒದಗಿಸುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಪೂರಕವಾಗಲಿ ಎಂದು ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಮತ್ತು ಐವನ್ ಡಿಸೋಜ, ವಿಧಾನ ಪರಿಷತ್ತು ಶಾಸಕರು, ಕಾರ್ಪೋರೇಟರ್‌ಗಳಾದ ಕದ್ರಿ ಮನೋಹರ್ ಶೆಟ್ಟಿ, ಹಾಗೂ ಸಂದೀಪ್ ಗೊರೊಡಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಡಿಸೋಜಾ, ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಉಪನಿಬಂಧಕರಾದ ತ್ರಿವೇಣಿ ರಾವ್ ಕೆ., ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.

ಉದ್ಯಮಿ ಹಾಗೂ ಸನ್ ಮೆಡಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ದೀಪಕ್ ಡಿಸೋಜಾ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಜೆಎಂಜಿ ಕನ್‌ಸ್ಟ್ರಕ್ಷನ್‌ನ ಮಾಲಕ ಜೋನ್ ಸುರೇಶ್, ದಕ್ಷಿಣ ಕನ್ನಡ ಗ್ರೋವರ್ಸ್ ಆರ್ಗಾನಿಕ್ ಕಲೆಕ್ಟಿವ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಹಾಗೂ ಡಿ.ಕೆ. ಗ್ರೂಪ್ ಆಫ್ ಕಂಪನೀಸ್, ಕಡಬದ ವ್ಯವಸ್ಥಾಪಕ ನಿರ್ದೇಶಕ ಎಸ್. ಸತೀಶ್ ನಾಯಕ್, ನ್ಯಾಯವಾದಿ ಎಲ್.ಎನ್. ಚಂದ್ರಹಾಸ ಕದ್ರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಸಮಾಜ ಸೇವೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಬ್ರದರ್ ಜೋಸೆಫ್ ಕ್ರಾಸ್ತ್ ಅವರನ್ನು ಸನ್ಮಾನಿಸಲಾಯಿತು. ಸಮಾಜದ ವಿವಿಧ ವರ್ಗಗಳ ಜನರಿಗೆ ನೆರವು ನೀಡುವಲ್ಲಿ ಹಾಗೂ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬ್ರದರ್ ಜೋಸೆಫ್ ಕ್ರಾಸ್ತ್ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಇದೇ ವೇಳೆ ಕೊಂಕಣ್ ಕ್ಯಾಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತದ ಅಧ್ಯಕ್ಷ ಶೇಷಿ ಲಿಡ್ವಿನ್ ಡಿಸೋಜ ಹಾಗೂ ಉಪಾಧ್ಯಕ್ಷ ಸೂಕ್ಷ್ಮ ಕ್ರಾಸ್ತಾ ಟಿ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳು, ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಗೌರವಿಸಿದರು.

ಮಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಕದ್ರಿ ಮಾರ್ಕೆಟ್‌ನಲ್ಲಿ ಪ್ರಧಾನ ಶಾಖೆ ಆರಂಭಿಸಿರುವುದು ಸಂಸ್ಥೆಯ ಸೇವಾ ವಿಸ್ತರಣೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಈ ಮೂಲಕ ಸ್ಥಳೀಯ ವ್ಯಾಪಾರಿಗಳು, ಉದ್ಯಮಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಹಣಕಾಸು ಮತ್ತು ಸಹಕಾರ ಕ್ಷೇತ್ರದ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸುವ ಅವಕಾಶ ದೊರೆಯಲಿದೆ.

ಸಹಕಾರ ಕ್ಷೇತ್ರವು ಜನಸಾಮಾನ್ಯರ ಆರ್ಥಿಕ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನೂತನ ಶಾಖೆಯ ಮೂಲಕ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ಸೇವೆ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಕದ್ರಿ ಮಾರ್ಕೆಟ್‌ನಂತಹ ಪ್ರಮುಖ ವಾಣಿಜ್ಯ ಕೇಂದ್ರದಲ್ಲಿ ಪ್ರಧಾನ ಶಾಖೆ ಕಾರ್ಯಾರಂಭ ಮಾಡಿರುವುದರಿಂದ ಸುತ್ತಮುತ್ತಲಿನ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಸಂಸ್ಥೆಯ ಸೇವೆಗಳನ್ನು ಪಡೆಯಲು ಮತ್ತಷ್ಟು ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಯಿತು.

ಗಣ್ಯರ ಉಪಸ್ಥಿತಿ, ಧಾರ್ಮಿಕ ಆಶೀರ್ವಚನ, ಸನ್ಮಾನ ಹಾಗೂ ಶುಭ ಹಾರೈಕೆಗಳೊಂದಿಗೆ ನಡೆದ ಉದ್ಘಾಟನಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು. ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಪ್ರಧಾನ ಶಾಖೆಯ ಯಶಸ್ಸಿಗೆ ಶುಭ ಹಾರೈಸಿದರು. ನೆಲ್ಸನ್ ಮೊನಿಸ್ ಕಾರ್ಯಕ್ರಮ ನಿರೂಪಿಸಿದರು.