ಉಡುಪಿ: ಕೃಷ್ಣನೂರಿನ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ವೈಭವಕ್ಕೆ ಉಡುಪಿ ನಗರ ಸಜ್ಜಾಗಿದೆ. ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈ ಬಾರಿಯ ಅಷ್ಟಮಿ ಸಂಭ್ರಮದ ಮೆರುಗನ್ನು ಹೆಚ್ಚಿಸಲು 50ಕ್ಕೂ ಅಧಿಕ ಹುಲಿವೇಷ ತಂಡಗಳು ಸಿದ್ಧತೆ ನಡೆಸಿವೆ.

ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಉಡುಪಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿಗಳ ಅಬ್ಬರ ಜೋರಾಗಲಿದೆ. ವಿವಿಧ ಪ್ರದೇಶಗಳ ಹುಲಿವೇಷ ತಂಡಗಳು ಲೋಬಾನ ಸೇವೆ ಮುಗಿಸಿಕೊಂಡು ಅಂತಿಮ ಹಂತದ ಬಣ್ಣಗಾರಿಕೆ ಹಾಗೂ ಪ್ರದರ್ಶನದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ.

ಪಡುಬೈಲೂರಿನ ಇಷ್ಟ ಶ್ರೀ ಮಹಾಲಿಂಗೇಶ್ವರ ತಂಡ, ಕಾಡುಬೆಟ್ಟುವಿನ ದಿ. ಅಶೋಕ್ ರಾಜ್ ನೇತೃತ್ವದ ಹುಲಿವೇಷ ತಂಡ, ಐರನ್ ಕಿಂಗ್ಡಾಮ್ ಬಲಾಯಿಪಾದೆ ತಂಡ, ತುಳುನಾಡ ಟೈಗರ್ ತಂಡ, ಯುವತಿಯರ ದರ್ಪಣ ತಂಡ ಸೇರಿದಂತೆ ಉಡುಪಿಯ ವಿವಿಧ ಭಾಗಗಳ ಹುಲಿವೇಷ ತಂಡಗಳು ಈ ಬಾರಿ ವಿಶೇಷ ಆಕರ್ಷಣೆಯಾಗಲಿವೆ.

ಸಾರ್ವಜನಿಕರ ಮನರಂಜನೆಯ ಜತೆಗೆ ಕರಾವಳಿಯ ವಿಶಿಷ್ಟ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶೀರೂರು ಮಠದ ವತಿಯಿಂದ ಎರಡು ದಿನಗಳ ಕಾಲ ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಹುಲಿವೇಷ ತಂಡಗಳ ಕುಣಿತ, ಚೆಂಡೆ-ವಾದ್ಯಗಳ ಸದ್ದು ಹಾಗೂ ಸಾವಿರಾರು ಜನರ ಸಂಭ್ರಮದಿಂದ ಉಡುಪಿ ಮತ್ತೊಮ್ಮೆ ಕೃಷ್ಣಮಯವಾಗಲಿದೆ. ವಿವಿಧ ವಿನ್ಯಾಸದ ಹುಲಿ ಬಣ್ಣಗಳು, ಆಕರ್ಷಕ ವೇಷಭೂಷಣಗಳು ಹಾಗೂ ವಿಶಿಷ್ಟ ನೃತ್ಯ ಪ್ರದರ್ಶನಗಳು ಈ ಬಾರಿಯ ವಿಟ್ಲಪಿಂಡಿ ಸಂಭ್ರಮಕ್ಕೆ ಮತ್ತಷ್ಟು ರಂಗು ತುಂಬಲಿವೆ.

ಕೃಷ್ಣನೂರಿನ ಅಷ್ಟಮಿ ವೈಭವದಲ್ಲಿ ಹುಲಿವೇಷದ ಗರ್ಜನೆ ಕೇಳಲು ಜನರು ಕಾತರದಿಂದ ಕಾಯುತ್ತಿದ್ದು, ಎರಡು ದಿನಗಳ ಕಾಲ ಉಡುಪಿ ನಗರ ಹಬ್ಬದ ಸಂಭ್ರಮದಲ್ಲಿ ಮುಳುಗಲಿದೆ.