ಬೆಂಗಳೂರು: ನಾಗರಿಕರು, ಪರಿಸರ ಸಂರಕ್ಷಣಾ ಹೋರಾಟಗಾರರು ಹಾಗೂ ಸ್ಥಳೀಯ ನಿವಾಸಿಗಳ ಕಲ್ಯಾಣ ಸಂಘಗಳು (ಆರ್‌ಡಬ್ಲ್ಯೂಎ) ಮತ್ತು ವಿರೋಧ ಪಕ್ಷಗಳಿಂದ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಕರ್ನಾಟಕ ಸಚಿವ ಸಂಪುಟ ಗುರುವಾರ ವಿವಾದಾತ್ಮಕ ಉದ್ಯಾನವನ ಮಸೂದೆಯನ್ನು ಹಿಂತೆಗೆದುಕೊಂಡಿದೆ.
ಇದೀಗ ಮಸೂದೆಯನ್ನು ಹಿಂತೆಗೆದುಕೊಂಡು ಮುಂದಿನ ದಿನಗಳಲ್ಲಿ ವ್ಯಾಪಕ ಚರ್ಚೆಗಾಗಿ ಸಾರ್ವಜನಿಕ ವಲಯದಲ್ಲಿ ಇರಿಸಲಾಗುವುದು ಹಾಗೂ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಅದನ್ನು ಬೇರೆ ರೂಪದಲ್ಲಿ ತರಲು ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಬೆಂಗಳೂರಿನ ಹಚ್ಚ ಹಸಿರು ಉದ್ಯಾನವನಗಳ ಮೇಲೆ ಇದರ ಸಂಭಾವ್ಯ ಪರಿಣಾಮದ ಕುರಿತು ಹೆಚ್ಚುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ ಶಾಸನವನ್ನು ಮರುಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೂಚಿಸಿದ ಒಂದು ದಿನದ ನಂತರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಸಂಪುಟ ಸಭೆಯ ನಂತರ ಮಾತನಾಡಿದ ಪರಮೇಶ್ವರ್, ಇದೀಗ ಇರುವ ರೀತಿಯಲ್ಲೇ ಶಾಸನವನ್ನು ಮುಂದುವರೆಸುವುದಿಲ್ಲ. ಬದಲಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಆನಂತರ ಅಗತ್ಯ ಮಾರ್ಪಾಡುಗಳನ್ನು ತಂದು ಮುಂದಿನ ಅಧಿವೇಶನಗಳಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು ಎಂದರು.
ವಿರೋಧ ಪಕ್ಷ ಬಿಜೆಪಿ ಮಸೂದೆಯ ವಸ್ತುಸ್ಥಿತಿಯನ್ನು ವಿಧಾನಸಭೆಯಲ್ಲಿ ಚರ್ಚಿಸದೆ ಕೇವಲ ರಾಜಕೀಯ ಉದ್ದೇಶಗಳಿಗಾಗಿ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸಿದೆ ಎಂದು ಇದೇವೇಳೆ ಅವರು ಆರೋಪಿಸಿದರು.
ಕರ್ನಾಟಕ ಸರ್ಕಾರಿ ಉದ್ಯಾನವನಗಳು (ಸಂರಕ್ಷಣೆ) ಕಾಯ್ದೆ ತಿದ್ದುಪಡಿ ಮಸೂದೆಯನ್ನು ಆಗಸ್ಟ್ 24 ರಂದು ವಿಧಾನಸಭೆಯು ಚರ್ಚೆಯಿಲ್ಲದೆ ಅಂಗೀಕರಿಸಿತ್ತು.
ಉದ್ಯಾನವನದ ಪ್ರದೇಶದಲ್ಲಿ ಶೇಕಡಾ 5ರಷ್ಟು ಭೂಮಿಯನ್ನು ಸಾರ್ವಜನಿಕರ ಮೂಲ ಸೌಕರ್ಯಕ್ಕೆ ಬಳಸುವ ಉದ್ದೇಶದಿಂದ ಅಲ್ಲಿ ಕಟ್ಟಡ ಸಂಕೀರ್ಣಗಳನ್ನು ಕಟ್ಟಲು ಈ ವಿವಾದಿತ ಉದ್ಯಾನವನ ಮಸೂದೆಯು ಅವಕಾಶ ಮಾಡಿಕೊಡುತ್ತಿದ್ದು, ಈ ನಿಯಮವು ಭವಿಷ್ಯದಲ್ಲಿ ಬೆಂಗಳೂರಿನ ಬಹುತೇಕ ಉದ್ಯಾನವನಗಳಲ್ಲಿನ ಹಚ್ಚ ಹಸಿರನ್ನೇ ಕಸಿದುಕೊಳ್ಳುವ ಭೀತಿಯಿದೆ ಎಂದು ಇತ್ತೀಚಿನ ದಿನಗಳಲ್ಲಿ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿ ಬೀದಿಗಿಳಿದಿದ್ದರು.

