ತುಮಕೂರು: ಶಿರಾ ತಾಲ್ಲೂಕಿನ ಬೆಂಚೆ ಗೇಟ್ ಬಳಿ ಚಿನ್ನದಂಗಡಿ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರನ್ನು ಪೊಲೀಸರು 12 ಗಂಟೆಯಲ್ಲಿ ಬಂಧಿಸಿ, ₹26 ಲಕ್ಷ ಮೌಲ್ಯದ ಚಿನ್ನ– ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.
ಭಾನುವಾರ ಇಡೀ ರಾತ್ರಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ‘ರಾಜಸ್ಥಾನದ ಅರವಿಂದ್ ಕುಮಾರ್ (28), ಡುಂಗರ್ ಸಿಂಗ್ (24), ಮಹೇಂದರ್ ಸಿಂಗ್ (32), ಮಧು ಸಿಂಗ್ (28) ಬಂಧಿತರು.
ನಾಲ್ವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು, 10 ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಇಲ್ಲಿ ಸೋಮವಾರ ಹೇಳಿದರು.
‘ಭಾನುವಾರ ಮಧ್ಯಾಹ್ನ 3.30ರ ಸಮಯದಲ್ಲಿ ನಾಲ್ವರು ಜಗತಾಂಭ ಚಿನ್ನದ ಮಳಿಗೆಗೆ ನುಗ್ಗಿದ್ದರು. ಮಾಲೀಕರಾದ ದಿನೇಶ್ ಮತ್ತು ನಾತಿದೇವಿ ಕಣ್ಣಿಗೆ ಖಾರದಪುಡಿ ಎರಚಿದ್ದರು. ಷಟರ್ ಕೆಳಗಡೆ ಎಳೆದ ಆಭರಣ ಕದ್ದು, ಬೊಲೆರೊ ವಾಹನದಲ್ಲಿ ತೆರಳಿದ್ದರು.
ಸಾರ್ವಜನಿಕರ ಮಾಹಿತಿ ಮೇರೆಗೆ ಎಚ್ಚೆತ್ತುಕೊಂಡ ಪೊಲೀಸರು, ದರೋಡೆಕೋರರು ಸಾಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಮತ್ತು ನಾಕಾಬಂಧಿ ಹಾಕಿದ್ದರು. ಪೊಲೀಸರ ಒಂದು ತಂಡ ಆರೋಪಿಗಳ ವಾಹನ ಬೆನ್ನಟ್ಟಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

