ಬೆಂಗಳೂರು: ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಕ್ರಿಪ್ಟೋ ಹೂಡಿಕೆ ನೆಪದಲ್ಲಿ ಯುವಕನಿಗೆ 21.11 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಟಿ.ದಾಸರಹಳ್ಳಿ ನಿವಾಸಿ ರಾಕೇಶ್‌ (29) ಎಂಬುವರು ನೀಡಿದ ದೂರಿನ ಮೇರೆಗೆ ಗರಿಕಿಪಾಟಿ ಸಿರೀಶಾ ಎಂಬುವರ ವಿರುದ್ಧ ಉತ್ತರ ವಿಭಾಗದ ಸೆನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕುವ ಸಲುವಾಗಿ ಫೆ.15 ರಂದು ಸಂಗಮ್‌ ಮ್ಯಾಟ್ರಿಮೋನಿಯಲ್ಲಿ ರಾಕೇಶ್‌ ಅಕೌಂಟ್‌ ತೆರೆದಿದ್ದರು. ಅದರ ಮೂಲಕ ಗರಿಕಿಪಾಟಿ ಸಿರೀಶಾ ಎಂಬ ಯುವತಿ ರಾಕೇಶ್‌ನನ್ನು ಸಂಪರ್ಕಿಸಿದ್ದರು. ನಂತರ ಇಬ್ಬರು ಸ್ನೇಹಿತರಾಗಿದ್ದರು. ಸಿರೀಶಾ, ರಾಕೇಶ್‌ಗೆ ಮದುವೆಯಾಗುವುದಾಗಿ ಹೇಳಿ ಕ್ರಿಪ್ಟೊ ಅಪ್ಲಿಕೇಷನ್‌ನಲ್ಲಿ ಡಿಇಎಕ್ಸ್‌ನಲ್ಲಿ ಟ್ರೇಡಿಂಗ್‌ ಮಾಡುವಂತೆ ಹೇಳಿ ವೆಬ್‌ಸೈಟ್‌ ಲಿಂಕ್‌ ಒಂದನ್ನು ಕಳುಹಿಸಿದ್ದಾಳೆ.

ನಂತರ ಬ್ಯಾಂಕ್‌ ಖಾತೆಯನ್ನು ನೀಡಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ಆರಂಭದಲ್ಲಿ ಲಾಭದ ಆಸೆಯನ್ನು ತೋರಿಸಿದ್ದಳು. ರಾಕೇಶ್‌ ಹಣವನ್ನು ವಿತ್‌ ಡ್ರಾ ಮಾಡಲು ಕಮೀಷನ್‌ ಕಟ್ಟಬೇಕೆಂದು ಹೇಳಿ ಹಂತ-ಹಂತವಾಗಿ 21.22 ಲಕ್ಷ ರೂ.ಅನ್ನು ಹೂಡಿಕೆ ಮಾಡಿಸಿಕೊಂಡು ನಂತರ ಯಾವುದೇ ಲಾಭವನ್ನು ನೀಡದೆ ಹಾಗೂ ಹೂಡಿಕೆ ಹಣವನ್ನು ವಾಪಸ್‌ ಕೊಡದೆ ವಂಚಿಸಿದ್ದಾರೆ. ರಾಕೇಶ್‌ ದೂರಿನಲ್ಲಿ ಆರೋಪಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಮಾಹಿತಿ ನೀಡಿದರು.