ನವದೆಹಲಿ: ಸ್ಮಾರ್ಟ್ಫೋನ್, ಇಯರ್ಫೋನ್ ಎರಡೂ ಅವಿಭಾಜ್ಯ ಅಂಗವಾಗಿದೆ. ದಿನ ನಿತ್ಯದ ಬದುಕಿನಲ್ಲಿ ಇವರೆಡು ಇರಲೇಬೇಕು. ಮಾರುಕಟ್ಟೆಯಲ್ಲಿ ಹಲವು ಬಗೆಯ ಇಯರ್ಫೋನ್ ಲಭ್ಯವಿದೆ. ಕಡಿಮೆ ಬೆಲೆಯಿಂದ ದುಬಾರಿ ಬೆಲೆ ವರೆಗಿನ ಇಯರ್ಫೋನ್ ಲಭ್ಯವಿದೆ.
ಇದೀಗ ಜನಪ್ರಿಯ ಹಾಗೂ ದುಬಾರಿ ಬ್ರ್ಯಾಂಡ್ ಲೂಯಿಸ್ ವಿಟಾನ್ ಇಯರ್ ಫೋನ್ ಬಿಡುಗಡೆ ಮಾಡಿದೆ. ಈ ಬಿಡುಗಡೆ ಅಷ್ಟೇನು ಸದ್ದು ಮಾಡಿಲ್ಲ. ಆದರೆ ಇದರ ಬೆಲೆಯಿಂದ ಈ ಇಯರ್ಫೋನ್ ಭಾರಿ ವೈರಲ್ ಆಗಿದೆ. ಕಾರಣ ಇದರ ಬೆಲೆ 1,660 ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 1.38 ಲಕ್ಷ ರೂಪಾಯಿ.
ಸೋನಿ, ಆ್ಯಪಲ್, ಸ್ಯಾಮ್ಸಂಗ್, ಒನ್ಪ್ಲಸ್ ಸೇರಿದಂತೆ ಹಲವು ಬ್ರ್ಯಾಂಡ್ಗಳು ಇಯರ್ಫೋನ್ ಮಾರಾಟ ಮಾಡುತ್ತಿದೆ. ಭಾರತದಲ್ಲೂ ಈ ಬ್ರ್ಯಾಂಡ್ಗಳು ಜನಪ್ರಿಯವಾಗಿದೆ. ಮಾರ್ಚ್ ತಿಂಗಳಲ್ಲಿ ಲೂಯಿಸ್ ವಿಟಾನ್ ಇಯರ್ಫೋನ್ ಬಿಡುಗಡೆ ಮಾಡಿತ್ತು. ಲೂಯಿಸ್ ವಿಟಾನ್ ಇಯರ್ಫೋನ್ ಜನಸಾಮಾನ್ಯರ ನಡುವೆ ಯಾವುದೇ ಸಂಚಲನ ಮೂಡಿಸಿರಲಿಲ್ಲ. ಇದೀಗ ಈ ಇಯರ್ಫೋನ್ ಬೆಲೆಯಿಂದಾಗಿ ಭಾರಿ ವೈರಲ್ ಆಗುತ್ತಿದೆ.
5 ಬಣ್ಣಗಳಲ್ಲಿ ನೂತನ ಇಯರ್ಫೋನ್ ಲಭ್ಯವಿದೆ. ವಿನ್ಯಾಸ, ಬಣ್ಣ, ಸ್ಟೈನ್ಲೆಸ್ ಸ್ಟೀಲ್ ಫಿನಿಶಿಂಗ್ ಸೇರಿದಂತೆ ಹಲವು ಆಕರ್ಷಣೆ ಇದರಲ್ಲಿದೆ. ಇತರ ಇಯರ್ಫೋನ್ಗಳಲ್ಲಿರುವಂತೆ ಬ್ಲೂಟೂಥ್ ಮಲ್ಟಿಪಾಯಿಂಟ್ ಫೀಚರ್ ಹೊಂದಿದೆ. ಈ ಮೂಲಕ ಒಂದೇ ಸಮಯ ಹಲವು ಡಿವೈಸ್ಗೆ ಬ್ಲೂಟೂಥ್ ಸಂಪರ್ಕ ಮಾಡಬಹುದು. ಮತ್ತೊಂದು ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 28 ಗಂಟೆ ಇಯರ್ಫೋನ್ ಬಳಕೆ ಮಾಡಬುಹುದು.