ಜಿಂಬಾಬ್ವೆ: ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಆಲ್ರೌಂಡರ್ ಹೀತ್ ಸ್ಟ್ರೀಕ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿತ್ತು. ಮಾಜಿ ಕ್ರಿಕೆಟಿಗ ಕ್ಯಾನ್ಸರ್ನಿಂದ ಬಳಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಗಳು ವಿವರಿಸಿದ್ದವು. ಆದರೆ, ಹೀತ್ಸ್ಟ್ರೀಕ್ ಸತ್ತಿಲ್ಲ ಬದುಕಿದ್ದಾರೆ ಎಂಬ ಅಚ್ಚರಿಯ ಸುದ್ದಿಯನ್ನು ಅವರ ಮಾಜಿ ಸಹೋದ್ಯೋಗಿ ಹಾಗೂ ಆಪ್ತ ಗೆಳೆಯ ಹೆನ್ರಿ ಒಲಾಂಗ ಹಂಚಿಕೊಂಡಿದ್ದಾರೆ.
ಮೊದಲಿಗೆ ಹೀತ್ ಸ್ಟ್ರೀಕ್ ಮೃತಪಟ್ಟಿದ್ದಾರೆ ಎಂದು ತಿಳಿದು ಹೆನ್ರಿ ಒಲಾಂಗ ಕೂಡ ತಮ್ಮ ಎಕ್ಸ್ ನಲ್ಲಿ ಭಾವನಾತ್ಮಕ ಸಂದೇಶ ಬರೆದು, ಸಂತಾಪ ಸೂಚಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ, ಹೀತ್ ಸ್ಟ್ರೀಕ್ ಜೊತೆಗಿನ ವಾಟ್ಸ್ಆಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಹೀತ್ ಸ್ಟ್ರೀಕ್ ಅವರ ಕಡೆಯಿಂದ ‘ನಾನಿನ್ನೂ ಬದುಕಿದ್ದೇನೆ’ ಎಂದು ಉತ್ತರ ಬರೆದಿರುವುದನ್ನು ಕಾಣಬಹುದಾಗಿದೆ.
“ಹೀತ್ ಸ್ಟ್ರೀಕ್ ಸತ್ತಿದ್ದಾರೆ ಎಂಬ ಸುದ್ದಿ ತಪ್ಪಾಗಿ ಹಬ್ಬಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಇದರ ವೈಭವೀಕರಣ ನಡೆದಿದೆ. ಅವರಿಂದಲೇ ಈಗ ಮಾಹಿತಿ ಲಭ್ಯವಾಗಿದ್ದು, 3ನೇ ಅಂಪೈರ್ ಅವರನ್ನು ಮರಳಿ ಕರೆತಂದಿದ್ದಾರೆ. ಪ್ರೀತಿಯ ಜನರೆ ಅವರಿನ್ನೂ ಬದುಕಿದ್ದಾರೆ,” ಎಂದು ಹನ್ರಿ ಒಲಾಂಗ ಮಹತ್ವದ ಮಾಹಿತಿ ಹೊರಹಾಕಿದ್ದಾರೆ.