ಕೇರಳ : ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯುಸಿಯಾಗಿರುವ ಟೀಂ ಇಂಡಿಯಾವು ಟಿ 20 ವಿಶ್ವಕಪ್ ಗೂ ಮುನ್ನ ಕೇರಳದ ತಿರುವನಂತಪುರಂನಲ್ಲಿರುವ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನ್ಯೂಜಿಲೆಂಡ್ ವಿರುದ್ಧದ ಐದನೇ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮುಂದಿನ ಪ್ರಮುಖ ಕ್ರಿಕೆಟ್ ಅಸೈನ್‌ಮೆಂಟ್‌ಗಳ ಹಿನ್ನೆಲೆಯಲ್ಲಿ ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಆಟಗಾರರು ಈ ಧಾರ್ಮಿಕ ಭೇಟಿಯನ್ನು ನಡೆಸಿದರು.

ಕೇರಳದ ಸಾಂಪ್ರದಾಯಿಕ ಸಂಸ್ಕೃತಿಗೆ ಗೌರವ ಸೂಚಿಸುವ ರೀತಿಯಲ್ಲಿ ಧೋತಿ ಧರಿಸಿ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರು ಎಲ್ಲರ ಗಮನ ಸೆಳೆದರು.
ಈ ಧಾರ್ಮಿಕ ಭೇಟಿಯಲ್ಲಿ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ರವಿ ಬಿಷ್ಟೋಯ್ ಹಾಗೂ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಪಾಲ್ಗೊಂಡಿದ್ದರು. ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದ ಆಟಗಾರರು, ತಂಡದ ಯಶಸ್ಸು ಮತ್ತು ಉತ್ತಮ ಪ್ರದರ್ಶನಕ್ಕಾಗಿ ಪ್ರಾರ್ಥಿಸಿದರು.

