ಮುಂಬೈ: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶವೊಂದನ್ನೂ ಹಂಚಿಕೊಂಡಿರುವ ಅವರು, “ಮೊದಲ ಬಾರಿಗೆ ಭಾರತದ ಟೆಸ್ಟ್ ಜೆರ್ಸಿ ಧರಿಸಿದಾಗ ನನ್ನ ಮನಸ್ಸಿನಲ್ಲಿ ಒಂದೇ ಒಂದು ಕನಸಿತ್ತು.

ನನ್ನ ದೇಶಕ್ಕಾಗಿ ಏನಾದರೂ ಸಾಧನೆ ಮಾಡಬೇಕು ಎಂಬುದಾಗಿತ್ತು. ಪ್ರತಿ ವಿಕೆಟ್, ಹೋರಾಟ, ಗಾಯ ಮತ್ತು ಪುನರಾಗಮನ ತಮಗೆ ಅಮೂಲ್ಯ ಪಾಠಗಳನ್ನು ಕಲಿಸಿವೆ. ಟೆಸ್ಟ್ ಕ್ರಿಕೆಟ್ ಕೇವಲ ಒಂದು ಮಾದರಿಯ ಆಟವಾಗಿರಲಿಲ್ಲ, ಅದು ತಮ್ಮ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು” ಎಂದು ಪೋಸ್ಟ್ ಮಾಡಿದ್ದಾರೆ.

“ಅಸಂಖ್ಯಾತ ಸವಿನೆನಪುಗಳೊಂದಿಗೆ ಭಾರವಾದ ಹೃದಯದಿಂದ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ನನ್ನ ಸಹ ಆಟಗಾರರು, ಕೋಚ್‌ಗಳು, ಕುಟುಂಬದವರು ಹಾಗೂ ಕಷ್ಟದ ಸಮಯದಲ್ಲಿಯೂ ನನ್ನ ಮೇಲೆ ನಂಬಿಕೆ ಇಟ್ಟಿದ್ದ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಗೂ ಶಮಿ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.