ಕೈರೊ: ನೈರುತ್ಯ ಯೆಮೆನ್‌ನ ಮಾರುಕಟ್ಟೆಯೊಂದರ ಮೇಲೆ ಸೌದಿ ಅರೇಬಿಯಾ ನಡೆಸಿದ ವೈಮಾನಿಕ ದಾಳಿಯಿಂದ ಕನಿಷ್ಠ 30 ಜನರು ಮೃತಪಟ್ಟಿದ್ದಾರೆ ಎಂದು ಇರಾನ್ ಬೆಂಬಲಿತ ಹೂಥಿ ಬಂಡುಕೋರರು ತಿಳಿಸಿದ್ದಾರೆ.

ಹೂಥಿ ಬಂಡುಕೋರರು ಮತ್ತು ಸೌದಿ ಬೆಂಬಲಿತ ಸೇನಾ ಪಡೆಗಳ ನಡುವೆ ಸಂಘರ್ಷ ಆರಂಭಗೊಂಡ ನಂತರ ನಡೆದ ಅತ್ಯಂತ ದೊಡ್ಡ ದಾಳಿ ಇದಾಗಿದೆ. ತೈಜ್ ಪ್ರಾಂತ್ಯದ ಅಲ್-ವಾಜಿಯಾ ಪ್ರದೇಶದಲ್ಲಿರುವ ಅಲ್‌–ಹಧಾರಾ ಮಾರುಕಟ್ಟೆ ಮೇಲೆ ನಡೆದ ದಾಳಿಯಲ್ಲಿ 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೂಥಿ ಆರೋಗ್ಯ ಸಚಿವಾಲಯದ ವಕ್ತಾರ ಅನೀಸ್ ಅಲ್ಸಾಬಾಹಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೈಜ್ ಪ್ರಾಂತ್ಯದ ಬಹುತೇಕ ಭಾಗಗಳು ಹೂಥಿಗಳ ನಿಯಂತ್ರಣದಲ್ಲಿವೆ. ಸೌದಿ ಬೆಂಬಲಿತ ಸರ್ಕಾರಿ ಪಡೆಗಳ ನೆಲೆಯಾಗಿರುವ ಪ್ರಾದೇಶಿಕ ರಾಜಧಾನಿಗೆ ಹೂಥಿ ಪಡೆಗಳು ಮುತ್ತಿಗೆ ಹಾಕಿವೆ. ಆದಾಗ್ಯೂ, ತೈಜ್‌ನಲ್ಲಿರುವ ಯೆಮೆನ್ ಸರ್ಕಾರದ ಮೂಲಗಳು ಈ ದಾಳಿಗೆ ಹೂಥಿ ಬಂಡುಕೋರರೇ ಕಾರಣ ಎಂದು ಸ್ಪಷ್ಟಪಡಿಸಿವೆ.

‘ಅಲ್-ವಾಜಿಯಾ ಪ್ರಾಂತ್ಯದ ಅಲ್-ಹಧಾರಾ ಮಾರುಕಟ್ಟೆಯ ಮೇಲೆ ಮೂರು ವೈಮಾನಿಕ ದಾಳಿಗಳು ನಡೆದಿವೆ. ಇದಕ್ಕೆ ಸೌದಿ ಅರೇಬಿಯಾವೇ ಕಾರಣ’ ಎಂದು ಹೂಥಿ ಸೇನಾ ವಕ್ತಾರ ಯಹ್ಯಾ ಸಾರಿ ಆರೋಪಿಸಿದ್ದಾರೆ. ದಾಳಿಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.