ಲಂಡನ್‌: ‘ವಿಸ್ಡನ್ ಅಲ್ಮನಾಕ್–2026’ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಕ್ರಿಕೆಟಿಗರು ಪ್ರಾಬಲ್ಯ ಸಾಧಿಸಿದ್ದು, ಒಟ್ಟು 9 ಪ್ರಶಸ್ತಿಗಳ ಪೈಕಿ ಏಳನ್ನು ಪಡೆದುಕೊಂಡಿದ್ದಾರೆ.

ಅನುಭವಿ ಆಲ್‌ರೌಂಡರ್‌ ದೀಪ್ತಿ ಶರ್ಮಾ ಅವರು ‘ವಿಸ್ಡನ್ ಅಲ್ಮನಾಕ್ ವರ್ಷದ ಕ್ರಿಕೆಟ್‌ ಆಟಗಾರ್ತಿ’ ಹಾಗೂ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ‘ವರ್ಷದ ಟಿ20 ಕ್ರಿಕೆಟಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2025ರ ಋತುವಿನಲ್ಲಿ ಅಭಿಷೇಕ್ ಶರ್ಮಾ ಅವರು ಅವರು 21 ಪಂದ್ಯಗಳಲ್ಲಿ 193ರ ಸ್ಟ್ರೈಕ್‌ರೇಟ್‌ನಲ್ಲಿ 859 ರನ್‌ ಗಳಿಸಿದ್ದರು. ಅದರಲ್ಲಿ 5 ಅರ್ಧಶತಕಗಳು ಸೇರಿವೆ. ದೀಪ್ತಿ ಶರ್ಮಾ ಅವರು 2025ರ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳಲ್ಲಿ ಮೂರು ಅರ್ಧಶತಕ ಸಹಿತ 215 ರನ್‌ ಬಾರಿಸಿದ್ದರು.

ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ (22) ಗಳಿಸಿದ್ದರು. ಅವರ ಆಲ್‌ರೌಂಡರ್‌ ಆಟದ ನೆರವಿನಿಂದ ಭಾರತವು ಮೊದಲ ಬಾರಿ ವಿಶ್ವಕಪ್ ಜಯಿಸಿತ್ತು. ಭಾರತ ಟೆಸ್ಟ್‌ ಮತ್ತು ಏಕದಿನ ತಂಡಗಳ ನಾಯಕ ಶುಭಮನ್ ಗಿಲ್, ವೇಗಿ ಮೊಹಮ್ಮದ್ ಸಿರಾಜ್, ವಿಕೆಟ್‌ ಕೀಪರ್‌–ಬ್ಯಾಟರ್‌ ರಿಷಭ್ ಪಂತ್ ಮತ್ತು ಅನುಭವಿ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು ‘ವಿಸ್ಡನ್ 5 ಕ್ರಿಕೆಟರ್ಸ್‌ ಆಫ್‌ ದಿ ಈಯರ್’ ಪ್ರಶಸ್ತಿಗೆ ಹೆಸರಿಸಲಾಗಿದೆ. ಇವರೆಲ್ಲಾ ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು.

ಪ್ರಶಸ್ತಿ ಪಟ್ಟಿಯಲ್ಲಿ ಇಬ್ಬರು ವಿದೇಶಿ ಆಟಗಾರರು ಸೇರಿದ್ದಾರೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್‌ ಹಾಗೂ ಇಂಗ್ಲೆಂಡ್‌ ಬ್ಯಾಟರ್‌ ಹಸೀಬ್ ಹಮೀದ್ ಅವರು ಕ್ರಮವಾಗಿ ‘ಅತ್ಯುತ್ತಮ ಕ್ರಿಕೆಟಿಗ’ ಹಾಗೂ ‘ವಿಸ್ಡನ್ 5 ಕ್ರಿಕೆಟರ್ಸ್‌ ಆಫ್‌ ದಿ ಈಯರ್’ ಗೌರವಕ್ಕೆ ಪಾತ್ರರಾಗಿದ್ದಾರೆ.

ಗಿಲ್ ಅವರು ಇಂಗ್ಲೆಂಡ್‌ ಪ್ರವಾಸದಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 754 ರನ್‌ಗಳನ್ನು ಗಳಿಸಿದ್ದರು. ಈ ಸರಣಿಯನ್ನು ಭಾರತ 2-2 ಡ್ರಾ ಮಾಡಿಕೊಳ್ಳುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು.