ಬಿಶ್ಕೆಕ್: ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದ ನಡುವೆ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಅಮೋ ನಿರ್ವಹಣೆಯೊಂದಿಗೆ ಭರ್ಜರಿ ಪುನರಾಗಮನ ಕಂಡಿರುವ ವಿನೇಶ್ ಪೋಗಟ್ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಕೋಟಾ ಸ್ಥಾನ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜತೆಗೆ ದೇಶದ ಇಬ್ಬರು ಯುವ ಮಹಿಳಾ ಕುಸ್ತಿಪಟುಗಳಾದ ಅಂಶು ಮಲಿಕ್ ಮತ್ತು 23 ವಯೋಮಿತಿಯ ವಿಶ್ವ ಚಾಂಪಿಯನ್ ರೀತಿಕಾ ಕೂಡ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಒಲಿಸಿಕೊಂಡಿದ್ದಾರೆ.
29 ವರ್ಷದ ವಿನೇಶ್ ಪೋಗಟ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಒಲಿಂಪಿಕ್ಸ್ ಕೋಟಾ ಗೆದ್ದುಕೊಂಡರು. ಶನಿವಾರ ನಡೆದ ಸೆಮಿೈನಲ್ ಪಂದ್ಯದಲ್ಲಿ ಅವರು ಕಜಾಕಿಸ್ತಾನದ 19 ವರ್ಷದ ಕುಸ್ತಿಪಟು ಲೌರಾ ಗನಿಕಿಜಿ ವಿರುದ್ಧ ಸುಲಭ ಗೆಲುವು ಸಾಧಿಸಿದರು. 2016ರ ರಿಯೋ ಮತ್ತು 2021ರ ಟೋಕಿಯೊ ಗೇಮ್ಸ್ನಲ್ಲಿ ಸ್ಪರ್ಧಿಸಿದ್ದ ವಿನೇಶ್ಗೆ ಇದು 3ನೇ ಒಲಿಂಪಿಕ್ಸ್ ಪ್ರವೇಶವಾಗಿದೆ.
ಭಾರತ ಈಗ ಪ್ಯಾರಿಸ್ ಒಲಿಂಪಿಕ್ಸ್ಗೆ ಮಹಿಳಾ ಕುಸ್ತಿ ಸ್ಪರ್ಧೆಯ 4 ಕೋಟಾ ಸ್ಥಾನ ಗೆದ್ದುಕೊಂಡಂತಾಗಿದೆ.
ಅಂತಿಮ್ ಪಾಂಗಲ್ ಈಗಾಗಲೆ 53 ಕೆಜಿ ವಿಭಾಗದ ಕೋಟಾ ಸ್ಥಾನ ಗೆದ್ದುಕೊಂಡಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ ಇನ್ನು ಕೋಟಾ ಸ್ಥಾನ ಗೆದ್ದುಕೊಟ್ಟವರಿಗೇ ಒಲಿಂಪಿಕ್ಸ್ ಸ್ಪರ್ಧೆ ಅವಕಾಶ ಕಲ್ಪಿಸುವುದೇ ಅಥವಾ ಮತ್ತೆ ಆಯ್ಕೆ ಟ್ರಯಲ್ಸ್ ಆಯೋಜಿಸುವುದೇ ಎಂಬುದನ್ನು ಕಾದುನೋಡಬೇಕಾಗಿದೆ.
ಭಾರತದ ಪುರುಷ ಕುಸ್ತಿಪಟುಗಳಲ್ಲಿ ಯಾರೊಬ್ಬರಿಗೂ ಇದುವರೆಗೆ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಲಭಿಸಿಲ್ಲ. ಮೇ 9ರಂದು ಟರ್ಕಿಯಲ್ಲಿ ನಡೆಯಲಿರುವ ವಿಶ್ವ ಅರ್ಹತಾ ಕೂಟ ಒಲಿಂಪಿಕ್ಸ್ ಕೋಟಾ ಸ್ಥಾನ ಗೆಲ್ಲಲು ಕೊನೇ ಅವಕಾಶವಾಗಿರುತ್ತದೆ.