News Karnataka Kannada
Sunday, May 05 2024
ಕ್ರೀಡೆ

ಮಡಿಕೇರಿ: ಇತಿಹಾಸ ಸೃಷ್ಟಿಸಿದ ಕೊಡವ ಹಾಕಿ ಪಂದ್ಯಾವಳಿ

Madikeri: Kodava Hockey Tournament created history
Photo Credit : By Author

ಮಡಿಕೇರಿ: ಮಹಾಮಳೆ, ಕೊರೊನಾ ಕಾರಣದಿಂದ ನಾಲ್ಕು ವರ್ಷಗಳ ಕಾಲ ಬಿಡುವು ಪಡೆದುಕೊಂಡಿದ್ದ ಕೊಡಗಿನ ಕೊಡವ ಕುಟುಂಬಗಳ ನಡುವಿನ ಕೊಡವ ಹಾಕಿ ಪಂದ್ಯಾವಳಿ ಈ ಬಾರಿ ಆರಂಭವಾಗಿದೆ. ಸುಮಾರು 23 ದಿನಗಳ ಕಾಲ ನಡೆಯುವ ಪಂದ್ಯಾವಳಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು 336 ಕುಟುಂಬಗಳು ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ.

2018ರಲ್ಲಿ 22ನೇ ವರ್ಷದ ಹಾಕಿ ಪಂದ್ಯಾವಳಿ ನಡೆದಿದ್ದು ಅದಾದ ಬಳಿಕ ಈ ಬಾರಿ 23ನೇ ವರ್ಷದ ಪಂದ್ಯಾವಳಿ ನಾಪೋಕ್ಲುನಲ್ಲಿ ನಡೆಯುತ್ತಿದ್ದು, ಅಪ್ಪಚೆಟ್ಟೋಳಂಡ ಕುಟುಂಬ ಸಾರಥ‍್ಯ ವಹಿಸಿಕೊಂಡಿದೆ. ಇನ್ನು ಈ ಹಾಕಿ ಪಂದ್ಯಾವಳಿ ಕೊಡಗಿನಲ್ಲಿ ಹೇಗೆ ಆರಂಭವಾಯಿತು. ಇದಕ್ಕೆ ಕಾರಣಕರ್ತರು ಯಾರು ಎಂಬುದನ್ನು ನಾವು ನೋಡಿದ್ದೇ ಆದರೆ ಈ ಪಂದ್ಯಾವಳಿ ಹಿಂದೆ ರೋಚಕ ಇತಿಹಾಸವಿರುವುದು ಗೊತ್ತಾಗುತ್ತದೆ.

ಕೊಡಗನ್ನು ‘ಕರ್ನಾಟಕದ ಪಂಜಾಬ್’ ಎಂಬ ಅನ್ವರ್ಥನಾಮದಿಂದ ಕೂಡ ಕರೆಯಲಾಗುತ್ತಿದೆ. ಇದಕ್ಕೆ ಇಲ್ಲಿನವರಿಗೆ ಹಾಕಿ ಮೇಲೆ ಇರುವ ಅಭಿಮಾನ ಸಾಕ್ಷಿಯಾಗಿದೆ. ಜತೆಗೆ ಕೊಡವ ಕುಟುಂಬಗಳ ನಡುವಿನ ಪಂದ್ಯಾವಳಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ. ಈ ಪಂದ್ಯಾವಳಿಯನ್ನು ಹುಟ್ಟು ಹಾಕಿದ ಕೀರ್ತಿ ಕೊಡವ ಹಾಕಿ ಆಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿದ್ದ ದಿ.ಪಾಂಡAಡ ಕುಟ್ಟಪ್ಪ ಅವರಿಗೆ ಸಲ್ಲುತ್ತದೆ.

ಅವರು ಹೇಗೆ ಪಂದ್ಯಾವಳಿಯನ್ನು ಆರಂಭಿಸಿದರು ಎನ್ನುವುದನ್ನು ನೋಡುತ್ತಾ ಹೋದರೆ ಅವರ ಬಾಲ್ಯದ ದಿನಗಳಿಗೆ ನಾವು ಹೋಗಬೇಕಾಗುತ್ತದೆ. ಅದು ಹಲವು ದಶಕಗಳ ಹಿಂದಿನ ಕಥೆ. ಆಗಿನ್ನೂ ಕುಟ್ಟಪ್ಪರವರು ಬಾಲಕ. ಅವರನ್ನು ಎಲ್ಲರೂ ಪ್ರೀತಿಯಿಂದ ಕುಟ್ಟಣಿ ಎಂದೇ ಕರೆಯುತ್ತಿದ್ದರು. ಅವರಿಗೆ ಬಾಲ್ಯದಿಂದಲೇ ಹಾಕಿ ಆಟದ ಬಗ್ಗೆ ಎಲ್ಲಿಲ್ಲದ ವ್ಯಾಮೋಹವಿತ್ತು. ಹೀಗಾಗಿ ಅವರು ತಮ್ಮ ವಯಸ್ಸಿನ ಬಾಲಕರನ್ನು ಸೇರಿಸಿಕೊಂಡು ಕಾಡುಮರದಿಂದ ತಾವೇ ಕೆತ್ತಿ ಮಾಡಿದ ಸ್ಟಿಕ್‌ನ್ನು ಹಿಡಿದು ರಬ್ಬರ್ ಚೆಂಡನ್ನು ನೂಕುತ್ತಾ ಕುಗ್ರಾಮ ಕರಡದÀ ಮೈದಾನ ತುಂಬಾ ಧೂಳೆಬ್ಬಿಸುತ್ತಾ ಹಾಕಿ ಆಟವನ್ನಾಡುತ್ತಿದ್ದರು. ಆದರೆ ಮುಂದೊAದು ದಿನ ಇದೇ ಬಾಲಕ ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವಿನ ‘ಹಾಕಿನಮ್ಮೆ’ಯ ಹುಟ್ಟಿಗೆ ಕಾರಣನಾಗಿ ‘ಹಾಕಿ ಪಂದ್ಯಾವಳಿಯ ಜನಕ’ ಎಂದೇ ಹೆಸರು ಮಾಡುತ್ತಾನೆ ಎಂಬುವುದನ್ನು ಯಾರೂ ಊಹಿಸಿರಲಿಲ್ಲ.

ಹಾಕಿ ಆಟದ ಬಗ್ಗೆ ಉತ್ಸಾಹ ಹೊಂದಿದ್ದ ಅವರು ಮುಂದೆ ಬೆಳೆದು ದೊಡ್ಡವರಾದಾಗ ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಶಾಶ್ವತವಾಗಿ ಉಳಿಸಿ ಬೆಳೆಸಲು ಕಂಕಣತೊಟ್ಟು ನಿಂತರು. ಕೊಡಗಿನಲ್ಲಿ ಅಡ್ಡಾಡುವಾಗಲೆಲ್ಲಾ ಮೈದಾನದಲ್ಲಿ ಯುವಕರು ಸ್ಟಿಕ್ ಹಿಡಿದು ಆಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿತ್ತು. ಈ ಸಂದರ್ಭ ಅವರ ತಲೆಯಲ್ಲಿ ಆಲೋಚನೆಯೊಂದು ಸುಳಿದಾಡ ತೊಡಗಿತ್ತು. ಕೊಡಗಿನಲ್ಲಿ ಕೊಡವ ಕುಟುಂಬಗಳಲ್ಲಿ ಹಲವಾರು ಮಂದಿ ಹಾಕಿ ಕ್ರೀಡೆಯತ್ತ ಒಲವು ಹೊಂದಿದ್ದಾರೆ ಅಂತಹವರಿಗೆ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಿ ಏಕೆ ಪ್ರೋತ್ಸಾಹ ನೀಡಬಾರದು ಎಂದು ತಮ್ಮನ್ನು ಪ್ರಶ್ನಿಸಿಕೊಳ್ಳುತ್ತಿದ್ದರಲ್ಲದೆ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾರ್ಯಪ್ರವೃತ್ತರಾದರು.

ಕೊಡವ ಕುಟುಂಬಗಳ ಆಟಗಾರರಿಗಾಗಿ ಹಾಕಿ ಉತ್ಸವ ನಡೆಸುವ ಬಗ್ಗೆ ಕುಟುಂಬಗಳ ಹಿರಿಯರ, ಉತ್ಸಾಹಿ ಆಟಗಾರರೊಂದಿಗೆ ಚರ್ಚೆ ನಡೆಸಿ ಪ್ರತಿವರ್ಷ ಒಂದೊAದು ಕುಟುಂಬ ಉತ್ಸವದ ಸಾರಥ್ಯ ವಹಿಸುವಂತೆಯೂ, ಯಾವ ಕುಟುಂಬಗಳು ಪಂದ್ಯಾವಳಿಯ ಸಾರಥ್ಯ ವಹಿಸುತ್ತವೆಯೋ ಆ ಕುಟುಂಬದ ಹೆಸರಿನ ಕಪ್‌ನ್ನು ವಿಜೇತ ತಂಡಕ್ಕೆ ನೀಡಲು ತೀರ್ಮಾನಿಸಿದರು.

ಅದರಂತೆ 1997ರಲ್ಲಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡAಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ ‘ಹಾಕಿನಮ್ಮೆ’ಯನ್ನು ಆರಂಭಿಸಲಾಯಿತು. ಪಾಂಡAಡ ಕುಟುಂಬವೇ ಸಾರಥ್ಯ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು 60ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಲಿಯಂಡ ಕುಟುಂಬದ ತಂಡ ಕಪ್ ಒಡೆತನ ಸಾಧಿಸಿತು. ಆರಂಭದ ಪಂದ್ಯಾವಳಿಯಿAದ ಇಲ್ಲಿಯವರೆಗೆ ಗಮನಿಸಿದರೆ ಮೊದಲು ಕೇವಲ ಪಂದ್ಯಾವಳಿಯಾಗಿದ್ದದ್ದು, ನಂತರದ ವರ್ಷಗಳಲ್ಲಿ ಅದೊಂದು ಉತ್ಸವವಾಗಿ ಮಾರ್ಪಾಡಾಯಿತಲ್ಲದೆ, ಅಭಿವೃದ್ಧಿಯ ಪಥದಲ್ಲಿ ಸಾಗಿರುವುದನ್ನು ನಾವು ಕಾಣಬಹುದಾಗಿದೆ.

ನಾಲ್ಕು ವರ್ಷಗಳ ಕಾಲ ಬಿಡುವು ಸಿಗದೆ ಹೋಗಿದ್ದರೆ ಬೆಳ್ಳಿ ಮಹೋತ್ಸವವನ್ನು ಆಚರಿಸಬಹುದಾಗಿತ್ತು. ಆದರೆ 2018ರ ತನಕ ಸುಧೀರ್ಘ 22 ವರ್ಷಗಳ ಕಾಲ ನಡೆಯುತ್ತಾ ಬಂದಿದ್ದ ಪಂದ್ಯಾವಳಿ ಎಲ್ಲ ಸಮಸ್ಯೆಗಳು ದೂರವಾಗಿರುವುದರಿಂದ 23ನೇ ವರ್ಷದ ಪಂದ್ಯಾವಳಿ ನಡೆಯುತ್ತಿದ್ದು, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಚಾಲನೆಯನ್ನೂ ನೀಡಿದ್ದಾರೆ.

ಸಾಂಪ್ರದಾಯಿಕ ಉಡುಗೆ ತೊಟ್ಟು ಬೆಳ್ಳಿಯ ಸ್ಟಿಕ್‌ನಿಂದ ಬೆಳ್ಳಿಯ ಚೆಂಡನ್ನು ತಳ್ಳುವ ಮೂಲಕ ಹಾಕಿ ಉತ್ಸವಕ್ಕೆ ಚಾಲನೆ ನೀಡುವುದು ಉತ್ಸವದ ಸ್ಪೆಷಲ್. ಹಾಕಿ ಪಂದ್ಯಾವಳಿಯ ಸಂದರ್ಭ ಆಟದೊಂದಿಗೆ ವಿವಿಧ ಸಾಂಪ್ರದಾಯಿಕ ನೃತ್ಯಗಳು, ಆಹಾರಮೇಳ, ರಸಮಂಜರಿ ಕಾರ್ಯಕ್ರಮ ಸೇರಿದಂತೆ ಹಲವು ವಿನೋದಾವಳಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹಾಗಾಗಿ ಹಾಕಿ ಪಂದ್ಯಾವಳಿ ಯಾರಿಗೂ ಬೋರ್ ಎನಿಸದೆ ಎಲ್ಲರೂ ಒಟ್ಟಾಗಿ ಕಲೆತು ಸಂಭ್ರಮಪಡುವ ಕೌಟುಂಬಿಕ ಉತ್ಸವವಾಗಿ ಗಮನಸೆಳೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು