ಶಾಂಘೈ: ಭಾರತದ ಬಿಲ್ಗಾರರು ಆರ್ಚರಿ ವಿಶ್ವಕಪ್ ಸ್ಟೇಜ್-1ರಲ್ಲಿ 4 ಚಿನ್ನ ಸಹಿತ 5 ಪದಕ ಗೆದ್ದುಕೊಂಡಿದ್ದಾರೆ. ಏಷ್ಯನ್ ಗೇಮ್ಸ್ ಚಾಂಪಿಯನ್ ಜ್ಯೋತಿ ಸುರೇಖಾ ಕಂಪೌಂಡ್ ವಿಭಾಗದಲ್ಲಿ ಭಾರತ ಗೆದ್ದ 3 ಸ್ವರ್ಣ ಪದಕಗಳಲ್ಲಿ ವಿಶೇಷ ಕೊಡುಗೆ ನೀಡಿ ಗಮನಸೆಳೆದರು.
ವಿಶ್ವ ನಂ. 3 ಜ್ಯೋತಿ ಸುರೇಖಾ ವೈಯಕ್ತಿಕ ವಿಭಾಗದ ಜತೆಗೆ ಮಹಿಳಾ ತಂಡ ವಿಭಾಗದಲ್ಲಿ ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಜತೆಗೆ ಚಿನ್ನ ಗೆದ್ದರು. ಮಿಶ್ರ ವಿಭಾಗದಲ್ಲಿ ಅಭಿಷೇಕ್ ಶರ್ಮ ಜತೆಗೂಡಿ ಚಿನ್ನದ ಪದಕ ಜಯಿಸಿದರು.
ಪುರುಷರ ತಂಡ ವಿಭಾಗದಲ್ಲಿ ಅಭಿಷೇಕ್ ಶರ್ಮ, ಪ್ರಿಯಾಂಶು, ಪ್ರಥಮೇಶ್ ಒಳಗೊಂಡ ತಂಡ ಚಿನ್ನದ ಪದಕ ಜಯಿಸಿತು. ಪುರುಷರ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾಂಶು ರಜತ ಪದಕ ಗೆದ್ದರು. ರಿಕರ್ವ್ ವಿಭಾಗದ ಪದಕ ಸ್ಪರ್ಧೆಗಳು ಭಾನುವಾರ ನಡೆಯಲಿವೆ.