ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಟಿವಿಯಲ್ಲಿ ವೀಕ್ಷಿಸುವವರ ಸಂಖ್ಯೆಯು ಹೊಸ ದಾಖಲೆ ನಿರ್ಮಿಸಿದೆ. ಹೋದ ವರ್ಷಕ್ಕಿಂತಲೂ ಈ ವರ್ಷದ ಟೂರ್ನಿಯನ್ನು ಹೆಚ್ಚು ವೀಕ್ಷಕರು ನೋಡಿದ್ದಾರೆ.
ಗುರುವಾರ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಐಪಿಎಲ್ ಅಧಿಕೃತ ಪ್ರಸಾರಕರಾದ ಸ್ಟಾರ್ ಇಂಡಿಯಾ, ‘ಈ ವರ್ಷದ ಐಪಿಎಲ್ನ 35ನೇ ಪಂದ್ಯದ ಮುಕ್ತಾಯದ ವೇಳೆಗೆ ವೀಕ್ಷಕರ ಸಂಖ್ಯೆಯು 38 ಕೋಟಿ ದಾಟಿದೆ. ಇದು ಹೋದ ವರ್ಷದ ಐಪಿಎಲ್ ಟೂರ್ನಿಗಿಂತ 1.2 ಕೋಟಿ ಹೆಚ್ಚಾಗಿದೆ’ ಎಂದಿದೆ.
ಸದ್ಯ ಯುಎಇಯಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಎರಡನೇ ಹಂತದ ಪಂದ್ಯಗಳಿಗೂ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ಪಂದ್ಯಕ್ಕೂ ಶೇ 32ರ ಸರಾಸರಿಯಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಪ್ಲೇ ಆಫ್ ಮತ್ತು ಫೈನಲ್ಗೆ ಇದು ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂದು ಸ್ಟಾರ್ ಇಂಡಿಯಾ ತಿಳಿಸಿದೆ.