ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಅವರು ಇನ್ನೆಂದೂ ತಾನು ಆಸ್ಟ್ರೇಲಿಯಾದ ಪರವಾಗಿ ಆಡುವುದಿಲ್ಲವೆಂದು ಕಣ್ಣೀರಿಡುತ್ತಾ ಪತ್ರಿಕಾಗೋಷ್ಠಿಯಲ್ಲಿ ಕ್ಷಮೆಯಾಚಿಸಿದ್ದಾರೆ.
ಚೆಂಡು ವಿರೂಪ ಪ್ರಕರಣದ ಸಂಬಂಧ ಈಗಾಗಲೇ ಒಂದು ವರ್ಷದ ನಿಷೇಧಕ್ಕೆ ಒಳಗಾಗಿರುವ ವಾರ್ನರ್, ನಿಷೇಧ ಮುಗಿದ ಬಳಿಕ ಕೂಡ ತಾನು ಆಸ್ಟ್ರೇಲಿಯಾ ಪರವಾಗಿ ಆಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ವ್ಯಕ್ತಿಯಾಗಿ ನಾನು ಯಾರು ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ತಜ್ಞರ ಸಲಹೆಗಳೊಂದಿಗೆ ನನ್ನಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದು ಒತ್ತಿ ಬರುತ್ತಿದ್ದ ಕಣ್ಣೀರನ್ನು ಒರಸಿಕೊಂಡ ವಾರ್ನರ್ ತಿಳಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ವೇಳೆ ವಾರ್ನರ್ ಚೆಂಡು ವಿರೂಪಗೊಳಿಸಿದ ಆರೋಪವಿದೆ. ವಾರ್ನರ್ ಜತೆಗೆ ಸ್ಮಿತ್ ಕೂಡ ಐಪಿಎಲ್ ನಲ್ಲಿ ಆಡುವಂತಿಲ್ಲ.