ತುಳುನಾಡಿನ ಚಾರಿತ್ರಿಕ ರಾಜಧಾನಿ ಬಾರಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ ವೀರಗಲ್ಲು ಇದೇ ಮೊದಲ ಬಾರಿಗೆ ಕಂಡುಬಂದಿದೆ. ಐತಿಹಾಸಿಕ ಬಾರಕೂರಿನ ಪ್ರಸಿದ್ಧ ದೇವಾಲಯ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರದ ಕಾರ್ಯ ಪ್ರಗತಿಯಲ್ಲಿದೆ. ಆದ್ದರಿಂದ ದೇವಾಲಯದಲ್ಲಿರುವ ಶಾಸನಗಳ ಸಮೀಕ್ಷೆಯನ್ನು ರಾಣಿ ಚಿಕ್ಕಾಯಿ ತಾಯಿ ಟ್ರಸ್ಟ್ (ರಿ.), ಗುಳ್ಳಾಡಿ ಮತ್ತು ಆದಿಮ ಕಲಾ ಟ್ರಸ್ಟ್ (ರಿ.), ಉಡುಪಿ ವತಿಯಿಂದ ಜಂಟಿಯಾಗಿ ನಡೆಸಲಾಯಿತು. ಆ ಸಂದರ್ಭದಲ್ಲಿ ಪಂಚಲಿಂಗೇಶ್ವರ ದೇವಾಲಯದ ಹೊರ ಆವರಣದಲ್ಲಿ ಈ ವೀರಗಲ್ಲು ಪತ್ತೆಯಾಗಿದೆ ಎಂದು ಪುರಾತತ್ವ ವಿದ್ವಾಂಸ ಪ್ರೊ. ಟಿ. ಮುರುಗೇಶಿಯವರು ಇಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಆತ್ಮಾಹುತಿ ಅಥವಾ ಆತ್ಮಬಲಿ ವೀರಗಲ್ಲುಗಳು ದಕ್ಷಿಣ ಭಾರತದಾದ್ಯಂತ ನಮಗೆ ಕಂಡು ಬರುತ್ತವೆ. ಸುಮಾರು 9-10 ನೇ ಶತಮಾನದಿಂದ 14-15 ನೇ ಶತಮಾನದ ವರೆಗೆ ಇಂತಹ ಬಲಿದಾನಗಳು ನಡೆದಿರುವುದು ಚಾರಿತ್ರಿಕವಾಗಿ ದಾಖಲಾಗಿವೆ. ಕೊಡಗು ಜಿಲ್ಲೆಯ ಸುಮಾರು 10 ನೇ ಶತಮಾನದ ಗಂಗರ ಕಾಲದ ಮೂರು ಆತ್ಮಬಲಿ ವೀರಗಲ್ಲುಗಳನ್ನು ನಾನು ಈಗಾಗಲೇ ವರದಿ ಮಾಡಿರುತ್ತೇನೆ.

ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟಿರುವ ಬಾರಕೂರು ಪಂಚಲಿಂಗೇಶ್ವರ ದೇವಾಲಯದ ಹೊರ ಆವರಣದಲ್ಲಿರುವ ವೀರಗಲ್ಲು ಆತ್ಮಬಲಿ ವೀರಗಲ್ಲು ಪ್ರಕಾರದ ಅತಿ ವಿಶಿಷ್ಟವಾದ ಸಿಡಿತಲೆ ವೀರಗಲ್ಲಾಗಿದೆ. ಆಯತಾಕಾರದ ಈ ವೀರಗಲ್ಲಿನ ಕೆಳಗಿನ ಎರಡು ಪಟ್ಟಿಕೆಗಳು ದೊಡ್ಡದಾಗಿವೆ ಮೇಲ್ಭಾಗದ ಪಟ್ಟಿಕೆ ಸ್ವಲ್ಪ ಕಿರಿದಾಗಿದೆ ಮತ್ತು ಕಲ್ಲಿನ ಮೇಲ್ಭಾಗವನ್ನು ಅರೆ ಕೋನಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಕೆಳಗಿನ ಪಟ್ಟಿಕೆಯಲ್ಲಿ ವೀರನೊಬ್ಬ ಬಲಿದಾನಕ್ಕೆ ಸಿದ್ದನಾಗಿ ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತಿದ್ದಾನೆ. ಎಡಭಾಗದಲ್ಲಿ ಕಟುಕ ಮತ್ತು ಬಲಭಾಗದಲ್ಲಿ ಬಿದಿರಿನ ಕೆಳಭಾಗವನ್ನು ಹಿಡಿದು ನಿಂತ ವ್ಯಕ್ತಿಯ ಚಿತ್ರಣವಿದೆ. ಕಟುಕ ಒಂದೇ ಏಟಿಗೆ ತಲೆಯನ್ನು ಕಡಿದಿದ್ದಾನೆ, ಬಿದಿರಿನ ತುದಿಗೆ ಕಟ್ಟಲಾಗಿದ್ದ ಆತನ ತಲೆ ಸಿಡಿದು ಬಾನಲ್ಲಿ ನೇತಾಡುತ್ತಿದೆ. ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ಮಡಿದ ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವಂತೆ ಚಿತ್ರಿಸಲಾಗಿದೆ.

ಮೇಲಿನ ಪಟ್ಟಿಕೆಯಲ್ಲಿ ಶಿವಲಿಂಗ, ಲಿಂಗದ ಎಡಭಾಗದಲ್ಲಿ ವೀರ, ಬಲಭಾಗದಲ್ಲಿ ಶಿವನನ್ನು ಆರಾಧಿಸುತ್ತಿರುವ ಅರ್ಚನ ಶಿಲ್ಪವಿದೆ. ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಶಿಲ್ಪಗಳಿವೆ. ಈ ವೀರಗಲ್ಲಿನ ಶಿಲ್ಪ ಶೈಲಿಯ ಆಧಾರದ ಮೇಲೆ ಸುಮಾರು 14 ನೇ ಶತಮಾನದ ಸಿಡಿತಲೆ ವೀರಗಲ್ಲೆಂದು ನಿರ್ಧರಿಸಬಹುದಾಗಿದೆ.

ಸಿಡಿತಲೆ ವೀರಗಲ್ಲು ಎಂದರೇನು?
ಸ್ವಯಂ ಆತ್ಮಬಲಿಗೆ ಸಿದ್ಧವಾದ ವ್ಯಕ್ತಿಯು, ಕಾಳಿಕಾದೇವಿ ಅಥವಾ ಕಾಲಭೈರವ ದೇವಾಲಯದ ಎದುರು ಎತ್ತರವಾದ ಮಣ್ಣಿನ ವೇದಿಕೆಯ ಮೇಲೆ ಪದ್ಮಾಸನದಲ್ಲಿ ಧ್ಯಾನಸ್ತನಾಗಿ ಕುಳಿತುಕೊಳ್ಳುತ್ತಾನೆ. ದೇವಾಲಯದ ಅರ್ಚಕರು ಬಲಿಪೂಜೆಯನ್ನು ನಡೆಸಿದ ನಂತರ, ಕಟುಕನೊಬ್ಬ ಹರಿತವಾದ ಕತ್ತಿಯಿಂದ ಒಂದೇ ಏಟಿಗೆ ತಲೆಯನ್ನು ಕತ್ತರಿಸುತ್ತಾನೆ, ಇದು ಆತ್ಮಬಲಿ.

ಆದರೆ, ಸಿಡಿತಲೆ ಬಲಿದಾನದಲ್ಲಿ ಆತ್ಮಬಲಿಗೆ ಸಿದ್ಧವಾಗಿ ಕುಳಿತ ವ್ಯಕ್ತಿಯ ತಲೆ ಜುಟ್ಟನ್ನು ಬಿದಿರಿನ ತುದಿಗೆ ಕಟ್ಟಲಾಗುತ್ತದೆ ಮತ್ತು ಆ ಬಿದಿರನ್ನು ಭೂಮಿಯಲ್ಲಿ ಗಟ್ಟಿಯಾಗಿ ಹೂಳಲಾಗಿರುತ್ತದೆ. ಕಟುಕ ತಲೆಯನ್ನು ಒಂದೇ ಏಟಿಗೆ ಕತ್ತರಿಸುತ್ತಿದ್ದಂತೆ, ತಲೆ ಆಗಸಕ್ಕೆ ಸಿಡಿದು, ಆಗಸದಲ್ಲಿ ತೇಲಾಡುತ್ತದೆ ಇಂತಹ ಆತ್ಮಬಲಿಯನ್ನು ಸಿಡಿತಲೆ ವೀರಗಲ್ಲು ಎಂದು ಕರೆಯಲಾಗುತ್ತದೆ.

ಈ ಸಂಶೋಧನೆಗೆ ಅಗತ್ಯ ಆರ್ಥಿಕ ಸೌಲಭ್ಯ ಒದಗಿಸಿದ ರಾಣಿ ಚಿಕ್ಕಾಯಿತಾಯಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಡಾ. ರಘುರಾಮ್ ಶೆಟ್ಟಿ ಗುಳ್ಳಾಡಿಯವರಿಗೂ, ದೇವಾಲಯದ ಆಡಳಿತಾಧಿಕಾರಿ ನಾಗಶಯನ ರವರಿಗೆ, ಮಾಜಿ ಮೊಕ್ತೇಸರರಾದ ಮಂಜುನಾಥ್ ರವರಿಗೆ, ಅರ್ಚಕರಿಗೆ ಹಾಗೂ ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಪುರಾತತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಸಿಂಚಿತ್ ಮತ್ತು ಶೋಧನ್ ರವರಿಗೆ ನಾನು ಆಭಾರಿಯಾಗಿದ್ದೇನೆ.