ಮೈಸೂರು: ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದ ಬಳಿಕ ಕಬಿನಿ ಮತ್ತು ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿರುವುದು ಮೈಸೂರು ಭಾಗದ ರೈತರಲ್ಲಿ, ಅದರಲ್ಲೂ ವಿಶೇಷವಾಗಿ ನೀರಾವರಿಗಾಗಿ ಈ ಜಲಾಶಯಗಳನ್ನೇ ಅವಲಂಬಿಸಿರುವ ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಕೊಡಗಿನಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಒಳಹರಿವು ಹೆಚ್ಚಾಗಿತ್ತಾದರೂ, ಪರಿಸ್ಥಿತಿ ಇನ್ನೂ ಆತಂಕಕಾರಿಯಾಗಿಯೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಲಭ್ಯವಿರುವ ನೀರಿನ ಪ್ರಮಾಣ ಕೇವಲ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಕಾಗಬಹುದಾದರೂ, ಪೂರ್ಣ ಕೃಷಿ ಚಟುವಟಿಕೆಗಳಿಗೆ ಸಾಕಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಬಿತ್ತನೆ ಪ್ರಮಾಣ ಶೇ.50ಕ್ಕಿಂತ ಕಡಿಮೆಯಾಗುವ ಸಾಧ್ಯತೆ: ಈಗಾಗಲೇ ಎದುರಾಗಿರುವ ನೀರಿನ ಕೊರತೆಯು ಈ ಪ್ರದೇಶದ ಕೃಷಿ ಯೋಜನೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದು, ಅಗತ್ಯ ನೀರು ಲಭ್ಯವಿಲ್ಲದ ಕಾರಣ ಮೈಸೂರು ಪ್ರದೇಶದಲ್ಲಿ ಈ ವರ್ಷ ಬಿತ್ತನೆ ಗುರಿಯ ಶೇ.50ಕ್ಕಿಂತ ಕಡಿಮೆ ಸಾಧಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಭತ್ತದ ಕೃಷಿಗೆ ಗಣನೀಯ ಮತ್ತು ನಿರಂತರ ನೀರಿನ ಪೂರೈಕೆಯ ಅಗತ್ಯವಿದ್ದು, ಜಲಾಶಯದ ಮಟ್ಟ ಕುಸಿದಾಗ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಕೊಡಗಿನಲ್ಲಿ ಗಣನೀಯ ಮಳೆಯಾಗಿದ್ದರಿಂದಾಗಿ ಆಗಸ್ಟ್ ಅಂತ್ಯದ ವೇಳೆಗೆ ಜಲಾಶಯಗಳಲ್ಲಿ ನೀರಿನ ಒಳಹರಿವು ತಕ್ಕಮಟ್ಟಿಗೆ ಸುಧಾರಿಸಿತ್ತಾದರೂ, ಒಟ್ಟಾರೆ ಕೃಷಿಗೆ ಇದು ಸಾಕಾಗಲಿಲ್ಲ.

ಜಲಾಶಯದಲ್ಲಿ ನೀರಿನ ಮಟ್ಟ ಹೀಗೆಯೇ ಕುಸಿಯುತ್ತಲೇ ಇದ್ದರೆ ಮುಂಬರುವ ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ರೈತರು ಆತಂಕದಲ್ಲಿದ್ದಾರೆ.

ಕೆಆರ್‌ಎಸ್ ಹೊರಹರಿವು ಒಳಹರಿವಿಗಿಂತ ಗಣನೀಯವಾಗಿ ಹೆಚ್ಚು: ಸೆಪ್ಟೆಂಬರ್ 6 ರ ವೇಳೆಗೆ, ಕೆಆರ್‌ಎಸ್‌ ನೀರಿನ ಮಟ್ಟ 107 ಅಡಿ ಇತ್ತು. ಜಲಾಶಯವು 2,774 ಕ್ಯೂಸೆಕ್ ಒಳಹರಿವನ್ನು ಪಡೆಯುತ್ತಿದ್ದರೆ, ಹೊರಹರಿವು 8,983 ಕ್ಯೂಸೆಕ್‌ನೊಂದಿಗೆ ಗಣನೀಯವಾಗಿ ಹೆಚ್ಚಿತ್ತು. ಒಳಹರಿವು ಮತ್ತು ಹೊರಹರಿವಿನ ನಡುವಿನ ವ್ಯತ್ಯಾಸದಿಂದಾಗಿ ಜಲಾಶಯದ ಸಂಗ್ರಹಿತ ನೀರು ಕುಸಿಯುತ್ತಲೇ ಇದ್ದು, ಕೃಷಿಗಾಗಿ ಸಾಕಷ್ಟು ನೀರಿನ ಲಭ್ಯತೆಗಾಗಿ ಕಾಯುತ್ತಿರುವ ರೈತರು ಭವಿಷ್ಯದ ಸ್ಥಿತಿಗತಿಯ ಬಗ್ಗೆ ಇದೀಗ ಪರಿತಪಿಸುತ್ತಿದ್ದಾರೆ. ಈ ನಡುವೆಯೂ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರೆದಿರುವುದು ಕೃಷಿ ಸಮುದಾಯಗಳಲ್ಲಿ ಆತಂಕವನ್ನು ಮತ್ತಷ್ಟು ತೀವ್ರಗೊಳಿಸಿದೆ.