Bengaluru 27°C
Ad

“ಆರೋಗ್ಯವೇ ಭಾಗ್ಯ”; ನಮ್ಮ ಆರೋಗ್ಯ ಕಾಪಾಡುವ ವೈದ್ಯರಿಗೆ ನಮನ

Thank You

ವಿಶ್ವದಲ್ಲಿ ವರ್ಷದ ಪ್ರತಿಯೊಂದು ದಿನವನ್ನು ಒಂದೊಂದು ಕ್ಷೇತ್ರಕ್ಕೆ ಅರ್ಪಿಸಲಾಗಿದ್ದು, ಅದರಂತೆ ಜುಲೈ 1ನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇವತ್ತು ವೈದ್ಯರು ಎಷ್ಟು ಮುಖ್ಯ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ… ನಾವು ಯಾವಾಗ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿಯುತ್ತೇವೆ ಎನ್ನುವುದನ್ನು ಹೇಳಲಾಗದ ಪರಿಸ್ಥಿತಿಯಲ್ಲಿದ್ದೇವೆ. ಈಗ ನಮ್ಮೆಲ್ಲರ ಬದುಕು ಗುಳಿಗೆ ಮೇಲೆಯೇ ನಿಲ್ಲುವಂತಾಗಿರುವುದು ಬೇಸರದ ಸಂಗತಿಯಾಗಿದೆ.

Ad
300x250 2

ನಾವು ಆರೋಗ್ಯವಾಗಿದ್ದಾಗ ಎಲ್ಲವೂ ಸರಿಯಾಗಿದೆ ಎಂಬಂತೆ ಭಾಸವಾಗುತ್ತದೆ. ಆದರೆ ಯಾವುದಾದರೂ ಕಾಯಿಲೆ ಅಡರಿಕೊಂಡು ಅದಕ್ಕೆ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆದು ಬಂದಾಗ ಮಾತ್ರ ವೈದ್ಯರ ಪ್ರಾಮುಖ್ಯತೆ ಗೊತ್ತಾಗುತ್ತದೆ. ಒಂದು ಕಾಲವಿತ್ತು. ಸಣ್ಣಪುಟ್ಟ ಕಾಯಿಲೆಗಳು ಬಂದಾಗ ಮನೆ ಔಷಧಿಯಿಂದಲೇ ಅದು ಗುಣವಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ ನಾವು ಆಸ್ಪತ್ರೆಗೆ ಹೋಗಬೇಕಾಗಿದೆ. ವೈದ್ಯರ ಸಲಹೆ ಪಡೆಯಬೇಕಾಗಿದೆ.

ವೈದ್ಯರಿಲ್ಲದ ಪ್ರಪಂಚವನ್ನು ಊಹಿಸಲು ಸಾಧ್ಯವಿಲ್ಲದಂತಾಗಿದೆ. ಹೀಗಾಗಿ ವೈದ್ಯ ವೈದ್ಯೋ ನಾರಾಯಣೋ ಹರಿಃ ಎಂಬುದು ಸಾರ್ವಕಾಲಿಕವಾದುದ್ದಾಗಿದೆ. ಹೀಗಾಗಿ ವೈದ್ಯರ ದಿನದಂದು ನಾವು ಪ್ರತಿಯೊಬ್ಬ ವೈದ್ಯರಿಗೂ ಸೆಲ್ಯೂಟ್ ಮಾಡಬೇಕಿದೆ. ಬದಲಾದ ಕಾಲದಲ್ಲಿ ಆರೋಗ್ಯವನ್ನು ಕಾಪಾಡಲು ಹೆಣಗಾಡಬೇಕಾಗಿದೆ. ಅಷ್ಟೇ ಅಲ್ಲದೆ ಚಿಕಿತ್ಸೆ ಪಡೆಯಲು ಹಣ ಹೊಂದಿಸಬೇಕಿದೆ. ಚಿಕಿತ್ಸೆ ದುಬಾರಿಯಾದ ಕಾಲದಲ್ಲಿ, ಎಲ್ಲವೂ ಹಣದಿಂದಲೇ ನಡೆಯುತ್ತಿದೆಯೇನೋ? ಎಂಬಂತಹ ಕಾಲದಲ್ಲಿ ಬಡರೋಗಿಗಳ ಜೀವಕ್ಕೆ ಆಸರೆಯಾಗಿರುವ ರೋಗಿಗಳ ಸೇವೆಯನ್ನೇ ತಮ್ಮ ಸೇವೆ ಎಂಬಂತೆ ಬದುಕುತ್ತಿರುವ ವೈದ್ಯರು ನಮ್ಮ ನಡುವೆ ಇದ್ದಾರೆ ಎನ್ನುವುದೇ ಸಂತಸದ ವಿಚಾರವಾಗಿದೆ.

ಇನ್ನು ಭಾರತದಲ್ಲಿ ಜುಲೈ1ನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವುದರ ಹಿಂದೆ ಹಲವು ಮಹತ್ವದ ಸಂಗತಿಗಳಿವೆ. ಅದು ಮೇಲ್ನೋಟಕ್ಕೆ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮದಿನವಾದರೂ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಡಾ.ಬಿದನ್ ಚಂದ್ರ ರಾಯ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರೂ ಆಗಿದ್ದರು.

ಅವರು ಲಂಡನ್ನಿನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿಗಳೆರಡನ್ನೂ ಪಡೆದ ತಜ್ಞವೈದ್ಯ, ಶಸ್ತ್ರಚಿಕಿತ್ಸಕರಾಗಿದ್ದರು. ಇವರು ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರೊಂದಿಗೆ  ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯೊಂದಿಗೆ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಿದ ಮಹಾಚೇತನ.

ಇಂತಹ ಮಹಾನ್ ಚೇತನ ಜುಲೈ 1, 1882ರಲ್ಲಿ ಜನಿಸಿ ಜುಲೈ 1, 1962ರಂದು ವಿಧಿವಶರಾದರು. ಆದರೆ ಅವರು ಜುಲೈ 1ರಂದು ಜನಿಸಿ, ಜುಲೈ 1ರಂದೇ ಇಹಲೋಕ ತ್ಯಜಿಸಿದ್ದು ವಿಶೇಷ. ಅವರ ನೆನಪು ಚಿರವಾಗಿರಲೆಂದೇ ವೈದ್ಯರ ದಿನಾಚರಣೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.  ಮತ್ತು ಅದನ್ನು ಆಚರಿಸುತ್ತಾ ಬರಲಾಗುತ್ತಿದೆ. ವೈದ್ಯವೃತ್ತಿ ಎನ್ನುವುದೇ ವಿಭಿನ್ನ, ವಿಶಿಷ್ಟ ಮತ್ತು ಸಮಾಜಮುಖಿ ಕಾಯಕವಾಗಿದೆ. ಹೀಗಾಗಿಯೇ ರೋಗಿಯ ಪಾಲಿಗೆ ವೈದ್ಯರು ದೇವರಾಗುತ್ತಾರೆ. ಬಹಳಷ್ಟು ಜನ ತಾವು ವೈದ್ಯರಾಗಬೇಕೆಂದು ಬಯಸುತ್ತಾರೆ. ಆದರೆ  ಅದರಲ್ಲಿ ಕೆಲವರು ಮಾತ್ರ ಆ ಅವಕಾಶ ಪಡೆಯುತ್ತಾರೆ.

ಕೆಲವು ವೃತ್ತಿಗಳನ್ನು ವೃತ್ತಿಗಳಾಗಿಯೇ ಸಮಾಜ ನೋಡುತ್ತದೆ. ಆದರೆ ವೈದ್ಯವೃತ್ತಿ ಹಾಗಿಲ್ಲ ಅದನ್ನು ಸೇವೆಯೆಂದೇ ಜನ ಪರಿಗಣಿಸುತ್ತಾರೆ. ಹೀಗಾಗಿ ವೈದ್ಯರು ತಮ್ಮ ವೃತ್ತಿಗೆ ಅಪಚಾರ ಎಸಗದಂತೆ ಕಾರ್ಯ ನಿರ್ವಹಿಸಬೇಕಾಗಿದೆ. ವೈದ್ಯನು ತಾನು ಎಷ್ಟೇ ಒತ್ತಡದಲ್ಲಿರಲಿ, ಅದನ್ನು ತೋರಿಸಿಕೊಳ್ಳುವ ಹಾಗಿಲ್ಲ. ರೋಗಿಗೆ ಚಿಕಿತ್ಸೆಯನ್ನು ಹಾಗೂ ನೋವಿನಲ್ಲಿ ಪಾಲ್ಗೊಂಡು ಸಾಂತ್ವನವನ್ನು ನೀಡಬೇಕಾಗುತ್ತದೆ. ಇದು ವೃತ್ತಿಧರ್ಮವಾಗಿದೆ. ಅದು ಏನೇ ಇರಲಿ ಇವತ್ತು ನಾವು ವೈದ್ಯರಿಂದ ದೂರವಿದ್ದು ಬದುಕಲಾರದ ಕಾಲಘಟ್ಟದಲ್ಲಿದ್ದೇವೆ. ಹೀಗಾಗಿ ನಮ್ಮ ಆರೋಗ್ಯ ಕಾಪಾಡುವ ವೈದ್ಯರಿಗೊಂದು ನಮನವಿರಲಿ.

Ad
Ad
Nk Channel Final 21 09 2023
Ad