ಶಿವಮೊಗ್ಗ: ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಾರ್ಗಸೂಚಿ ಅನ್ವಯ ಕಾರ್ಯಾಚರಣೆಗೆ, ಪೈಲಟ್ಗಳ ಕೊರತೆ ಕಾರಣಕ್ಕೆ ಶಿವಮೊಗ್ಗ–ಬೆಂಗಳೂರು ನಡುವೆ ವಿಮಾನ ಸಂಚಾರ ಮೇ 1ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಇಂಡಿಗೊ ಏರ್ಲೈನ್ಸ್ ಸಂಸ್ಥೆ ಮುಂದಾಗಿದೆ.
‘ಇಂಡಿಗೊ ಸಂಸ್ಥೆ ನಿತ್ಯ ಶಿವಮೊಗ್ಗ-ಬೆಂಗಳೂರು ಮಧ್ಯೆ ವಿಮಾನ ಹಾರಾಟ ನಡೆಸುತ್ತಿತ್ತು. ಮೂರು ತಿಂಗಳ ಅವಧಿಗೆ (ಅಕ್ಟೋಬರ್) ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಸಂಸ್ಥೆ ಮಾಹಿತಿ ನೀಡಿದೆ’ ಎಂದು ಇಲ್ಲಿನ ಸೋಗಾನೆಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದರು.
ಶಿವಮೊಗ್ಗ–ಬೆಂಗಳೂರು ನಡುವೆ ಹೆಚ್ಚಿನ ಜನದಟ್ಟಣೆ ಇರುವುದರಿಂದ ವಿಮಾನ ಹಾರಾಟ ನಿಲ್ಲಿಸದಂತೆ ಇಂಡಿಗೊ ಸಂಸ್ಥೆಗೆ ಸರ್ಕಾರ ಮನವಿ ಮಾಡಿತ್ತು. ಆದರೆ ಅದಕ್ಕೆ ಸಂಸ್ಥೆ ಒಪ್ಪಿಲ್ಲ. ಡಿಜಿಸಿಎ ಮಾರ್ಗಸೂಚಿ ಪಾಲನೆಗಾಗಿ ಬೆಂಗಳೂರು–ಶಿವಮೊಗ್ಗ ಮಾತ್ರವಲ್ಲ ಕಡಿಮೆ ದೂರದ ಮಾರ್ಗಗಳಲ್ಲಿ ಬಹಳಷ್ಟು ಕಡೆ ಶುಕ್ರವಾರದಿಂದ ಸಂಸ್ಥೆ ವಿಮಾನ ಹಾರಾಟ ನಿಲ್ಲಿಸುತ್ತಿದೆ ಎಂದು ಅವರು ಹೇಳುತ್ತಾರೆ.
ಗುಜರಾತ್ನ ಅಹಮದಾಬಾದ್ನಲ್ಲಿ 2025ರ ಜೂನ್ 12ರಂದು ಏರ್ಇಂಡಿಯಾ ವಿಮಾನ (ಎಐ171) ಪತನದ ನಂತರ ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗೆ ಡಿಜಿಸಿಎ ಕೆಲವು ನಿಯಮಾವಳಿ ರೂಪಿಸಿದೆ. ಅವುಗಳ ಅಳವಡಿಕೆಗೆ ಒಂದು ವರ್ಷದ ಕಾಲಾವಕಾಶ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗಿದೆ. ಆ ನಿಯಮಾವಳಿ ಪಾಲನೆಯಿಂದ ಇಂಡಿಗೊ ಸಂಸ್ಥೆಗೆ ಪೈಲಟ್ಗಳ ಕೊರತೆ ಆಗಿದೆ ಎಂದು ಅವರು ಹೇಳುತ್ತಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸದ್ಯ ಸ್ಟಾರ್ ಏರ್ ಸಂಸ್ಥೆ ಹೈದರಾಬಾದ್, ಗೋವಾ ಹಾಗೂ ತಿರುಪತಿಗೆ, ಸ್ಪೈಸ್ ಜೆಟ್ ಸಂಸ್ಥೆ ಶಿವಮೊಗ್ಗದಿಂದ ಹೈದರಾಬಾದ್ ಹಾಗೂ ಚೆನ್ನೈಗೆ ನಿತ್ಯ ವಿಮಾನ ಓಡಾಟ ನಡೆಸುತ್ತಿವೆ.

