ಮಂಗಳೂರು : ಸುಪ್ರಸಿದ್ಧ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ 2026-27ನೇ ಸಾಲಿನ ಆಡಳಿತ ಸಮಿತಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.) ವತಿಯಿಂದ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದ್ದು, ಸಮಿತಿಯು ಕ್ಷೇತ್ರವನ್ನು ಮುನ್ನಡೆಸಲು ಸನ್ನದ್ಧವಾಗಿದೆ ಎಂದು ಸಮಿತಿಯ ನೂತನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2025ರ ಜೂನ್ 20ರಂದು ನಡೆದ ಅನಧಿಕೃತ ಸಭೆಯ ವಿರುದ್ಧ ಕಾನೂನು ಹೋರಾಟ ನಡೆಸಲಾಗಿತ್ತು. ಕ್ಷೇತ್ರದ ಅಧ್ಯಕ್ಷರ ಅನುಮತಿ ಇಲ್ಲದೆ ಮತ್ತು ಅಗತ್ಯ ಬಹುಮತವಿಲ್ಲದೆ ನಡೆದಿದ್ದ ಆ ಸಭೆಯು ಅಸಂವಿಧಾನಿಕವಾಗಿತ್ತು. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಸುದೀರ್ಘ ವಿಚಾರಣೆಯ ನಂತರ ಜಿಲ್ಲಾ ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ನೀಡಿದೆ. ಇದು ನ್ಯಾಯಕ್ಕೆ ಸಂದ ಜಯವಾಗಿದೆ ಎಂದು ಮಿಜಾರ್ ವಿವರಿಸಿದರು.

ಫೆ 16ರಂದು ನಾರಾಯಣ ಗುರು ಕಾಲೇಜಿನ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ವಾರ್ಷಿಕ ಪ್ರತಿನಿಧಿ ಸಭೆಯಲ್ಲಿ ಈ ನೂತನ ಸಮಿತಿಯನ್ನು ಆರಿಸಲಾಗಿದೆ. ಸಭೆಯ ನಿಯಮದಂತೆ 50 ಜನ ಸದಸ್ಯರ ಎಕ್ಸಿಕ್ಯೂಟಿವ್ ಸಮಿತಿಯನ್ನು ರಚಿಸಿ, ಅದರಲ್ಲಿ ಒಂಬತ್ತು ಜನರನ್ನು ಕ್ಷೇತ್ರದ ಆಡಳಿತ ಸಮಿತಿಗೆ ಚುನಾಯಿತರನ್ನಾಗಿ ಘೋಷಿಸಲಾಗಿದೆ.

ಬಿಲ್ಲವ ಸಮಾಜದ ಗುರು-ಹಿರಿಯರ ಆಶಯದಂತೆ ಸ್ಥಾಪಿತಗೊಂಡಿರುವ ಯೂನಿಯನ್ ಮೂಲಕ ಬೈಲಾ ಪ್ರಕಾರವೇ ಈ ಸಮಿತಿಯನ್ನು ರಚಿಸಲಾಗಿದ್ದು, ಕ್ಷೇತ್ರದ ಸರ್ವ ಭಕ್ತರ ಸಹಕಾರದೊಂದಿಗೆ ಕ್ಷೇತ್ರವನ್ನು ಮುನ್ನಡೆಸಲು ಸಮಿತಿ ಬದ್ಧವಾಗಿದೆ ಎಂದು ವಿವರಿಸಿದರು.