ನಂಜನಗೂಡು: ಹಳೇ ದ್ವೇಷ ಹಿನ್ನಲೆ ದ್ವಿತೀಯ ಪಿಯು ವಿದ್ಯಾರ್ಥಿನಿ ಭವಿಷ್ಯಕ್ಕೆ ಕುಟುಂಬವೊಂದು ತಣ್ಣೀರೆರೆಚಲು ಹುನ್ನಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಂದೆ ಓದಿದ್ರೆ ನಿನ್ನ ಮುಗಿಸುವುದಾಗಿ ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ಘಟನೆ ನಂಜನಗೂಡಿನ ಪಾಳ್ಯಾ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ದ್ವಿತೀಯ ಪಿಯು ವಿದ್ಯಾರ್ಥಿನಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪೂರ್ಣಿಮಾ ಹಲ್ಲೆಗೆ ಒಳಗಾದ ದ್ವಿತೀಯ ಪಿಯು ವಿದ್ಯಾರ್ಥಿನಿ. ಘಟನೆ ಸಂಬಂಧ ಪಕ್ಕದ ಮನೆಯ ಸೋಮಣ್ಣ ಸೇರಿದಂತೆ 7 ಮಂದಿ ವಿರುದ್ದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಡ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗಿದ ಪೂರ್ಣಿಮಾ ಕ್ರಾಸ್ ಚೆಕ್ ಮಾಡುತ್ತಿರುವಾಗ ಏಕಾಏಕಿ ದೋಣ್ಣೆಗಳನ್ನ ಹಿಡಿದು ನುಗ್ಗಿದ ಸೋಮಣ್ಣ ಹಾಗೂ ಇತರರು ಹಳೆ ಧ್ವೇಷವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಮುಂದೆ ಓದಬಾರದು ಎಂದು ತಾಕೀತು ಮಾಡಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.

ನೆರವಿಗೆ ಬಂದ ಕುಟುಂಬಸ್ಥರ ಮೇಲೂ ಹಲ್ಲೆ ನಡೆದಿದೆ. ಮನೆ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ತಂದೆ ತಾಯಿ ಇಲ್ಲದೆ ಸೋದರ ಮಾವನ ಆಶ್ರಯದಲ್ಲಿ ಬೆಳೆಯುತ್ತಿರುವ ಪೂರ್ಣಿಮಾ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾಳೆ ಎಂಬ ಹೊಟ್ಟೆಕಿಚ್ಚಿನ ಹಿತ ದೃಷ್ಟಿಯಿಂದ ಚೆನ್ನಾಗಿ ಓದಬಾರದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಹಲ್ಲೆ ನಡೆಸಿದರೆಂದು ಪೂರ್ಣಿಮಾ ಆರೋಪಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲು ಮೀನಾ ಮೇಷ ಎಣಿಸಿದರು ನಾವು ನೀಡಿದ ದೂರನ್ನು ಸ್ವೀಕರಿಸದೆ ಅವರೇ ಬರೆದುಕೊಂಡಿರುವ ದೂರಿನ ಪ್ರತಿ ಆಧಾರದ ಮೇಲೆ ಸೋಮಣ್ಣ ಸೇರಿದಂತೆ 7 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.