ನಂಜನಗೂಡು: ಹುಲಿಗಳ ನಡುವಿನ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂರು ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದ ಕೆರೆ ಬಯಲಿನಲ್ಲಿ ನಡೆದಿದೆ.
ಮೃತ ಹುಲಿ ತಾಯಿಯಿಂದ ಬೇರ್ಪಟ್ಟು ಸ್ವತಂತ್ರವಾಗಿ ವಾಸಸ್ಥಳ ಗುರುತಿಸಿಕೊಳ್ಳುವ ಸಂದರ್ಭದಲ್ಲಿ ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕಾದಾಟದಲ್ಲಿ ಗಾಯಗೊಂಡ ಬಳಿಕ ಕಾಡಿನಿಂದ ಹೊರಬಂದು ಆಹಾರ ಸಿಗದೆ ಹಸಿವಿನಿಂದ ಬಳಲಿದ್ದ ಪರಿಣಾಮ ಹುಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಗಟ್ಟವಾಡಿ ಗ್ರಾಮದ ಕೆರೆ ಬಯಲಿನಲ್ಲಿ ಹುಲಿ ಮೃತಪಟ್ಟಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಲಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಇತರೆ ಹುಲಿಯೊಂದಿಗೆ ನಡೆದ ಕಾದಾಟವೇ ಸಾವಿಗೆ ಕಾರಣವೇ ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕ ಸ್ಪಷ್ಟವಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ತಿಳಿಸಿದ್ದಾರೆ. ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

