ಸರಗೂರು: ಹೆಡಿಯಾಲ ಅರಣ್ಯ ಪ್ರದೇಶದ ಹಾದನೂರು ಗ್ರಾಮದ ಹೊರವಲಯದಲ್ಲಿ ಮತ್ತೆ ಹುಲಿ ಪ್ರತ್ಯಕ್ಷವಾಗಿದೆ. ಕಾಡಿನಿಂದ ನಾಡಿನತ್ತ ಧಾವಿಸಿ ಗ್ರಾಮಸ್ಥರ ನಿದ್ದೆ ಕೆಡಿಸಿದೆ. ಬೆಳ್ಳಂ ಬೆಳಗ್ಗೆ ಜಮೀನು ಮಧ್ಯ ಕಾಣಿಸಿಕೊಂಡ ಹುಲಿ ಗ್ರಾಮಸ್ಥರನ್ನ ಕಂಗಾಲು ಮಾಡಿದೆ.

ಹುಲಿಯನ್ನು ಕಾಡಿನತ್ತ ಹಿಮ್ಮೆಟ್ಟಿಸಲು ಗ್ರಾಮಸ್ಥರು ಚಿರಾಟ ಮಾಡಿದ್ದಾರೆ.ಹಾದನೂರು ಗ್ರಾಮದ ಕೆರೆಯ ಸಮೀಪದ ಕೃಷಿ ಜಮೀನಿನ ಬೇಲಿಯ ಪೊದೆಗಳಿಂದ ಹೊರಬಂದು ವ್ಯಾಘ್ರ ದಿಕ್ಕಾಪಾಲಾಗಿ ಓಡಾಡಿದ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಗ್ರಾಮದ ಕುರಿ, ಮೇಕೆ, ಜಾನುವಾರುಗಳ, ಮೇಲೆ ಎರಗಲು ಹೊಂಚು ಹಾಕಿ ಕುಳಿತಿದ್ದ ಹುಲಿ ಜನರ ಚೀರಾಟಕ್ಕೆ ಬೆದರಿ ಕಾಲ್ಕಿತ್ತಿದೆ. ಸ್ಥಳಕ್ಕೆ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿ ಪರಮೇಶ್ ಸಿಬ್ಬಂದಿಗಳ ಸಮೇತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯ ಹೆಜ್ಜೆ ಗುರುತು ಮತ್ತು ಚಲನವಲನಗಳನ್ನು ಪರಿಶೀಲಿಸಿ ಗ್ರಾಮಸ್ಥರ ಮಾಹಿತಿ ಆದರಿಸಿ ಸಾಕು ಆನೆಗಳ ಮೂಲಕ ಸೆರೆ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.