ಮೈಸೂರು: ಮೈಸೂರು ರಾಜಮನೆತನದ ಕುರಿತು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ಮೈಸೂರಿನಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನರು ಭಾಗವಹಿಸಿ ರಾಜಮನೆತನದ ಪರವಾಗಿ ಘೋಷಣೆಗಳನ್ನು ಕೂಗಿದರು. ಯತೀಂದ್ರ ಸಿದ್ದರಾಮಯ್ಯ ಅವರ ಭಾವಚಿತ್ರದೊಂದಿಗೆ ವಿವಿಧ ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಇತಿಹಾಸಕ್ಕೆ ಅಪಮಾನ ಮಾಡಬಾರದು, ರಾಜರ ಕೊಡುಗೆಗಳನ್ನು ಸ್ಮರಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಯತೀಂದ್ರ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
‘ರಾಜಮನೆತನವಿಲ್ಲದೆ ಮೈಸೂರಿಲ್ಲ, ಮೈಸೂರಿಲ್ಲದೆ ನಾವಿಲ್ಲ’, ‘ಮೈಸೂರು ನಮ್ಮ ಹೆಮ್ಮೆ, ರಾಜಪರಂಪರೆ ನಮ್ಮ ಗೌರವ’ ಎಂಬ ಫಲಕಗಳನ್ನು ಪ್ರದರ್ಶಿಸಿ ರಾಜಮನೆತನಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು. ಪ್ರತಿಭಟನೆಯಲ್ಲಿ ಧರ್ಮಾತೀತವಾಗಿ ನಾಗರಿಕರು ಭಾಗವಹಿಸಿದ್ದು, ಮೈಸೂರಿನ ಇತಿಹಾಸ, ಪರಂಪರೆ ಹಾಗೂ ರಾಜಮನೆತನದ ಕೊಡುಗೆಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು.

