ಮೈಸೂರು: ಮೈಸೂರು ಭಾಗದ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಭುಗಿಲೆದ್ದಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ. ಮಹದೇವಪ್ಪ ಅವರ ನಡುವಿನ ಮುನಿಸು ಮುಂದುವರಿದಿದೆ ಎನ್ನಲಾಗುತ್ತಿದ್ದು, ಇಬ್ಬರು ನಾಯಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಸಚಿವ ಸ್ಥಾನ ಕೈತಪ್ಪಿದ ಬಳಿಕ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾದ ಎಚ್.ಸಿ. ಮಹದೇವಪ್ಪ, ಇತ್ತೀಚೆಗೆ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಅವರನ್ನು ಭೇಟಿಯಾಗಿಲ್ಲ ಎನ್ನಲಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಮಹದೇವಪ್ಪ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಾವೇಶ

ನವೆಂಬರ್ 26 ಮತ್ತು 27ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಸಮಾಲೋಚನಾ ಸಮಾವೇಶ ಆಯೋಜಿಸಲು ಎಚ್.ಸಿ. ಮಹದೇವಪ್ಪ ಸಿದ್ಧತೆ ನಡೆಸಿದ್ದಾರೆ. ದಲಿತ ಸಂಘರ್ಷ ಸಮಿತಿ ಐಕ್ಯತಾ ಹೋರಾಟ ಚಾಲನಾ ಸಮಿತಿ ಹಾಗೂ ಸಂವಿಧಾನ ಜನಾಂದೋಲನ ಸಮಿತಿ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು, ಮಹದೇವಪ್ಪ ನೇತೃತ್ವ ವಹಿಸಿದ್ದಾರೆ. ಈ ಸಂಬಂಧ ಅವರು ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.

ಅದೇ ದಿನ ಸಂವಿಧಾನ ದಿನಾಚರಣೆಗೆ ಸರ್ಕಾರದ ಸಿದ್ಧತೆ

ಇನ್ನೊಂದೆಡೆ, ಇದೇ ದಿನಗಳಲ್ಲಿ ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಸಿದ್ದರಾಮಯ್ಯ ಅವರು ಮೈಸೂರು ವಿಭಾಗದ ಕಾಂಗ್ರೆಸ್ ಶಾಸಕರ ಸಭೆ ನಡೆಸಿದ್ದು, ಸಭೆಗೆ ಎಚ್.ಸಿ. ಮಹದೇವಪ್ಪ ಗೈರಾಗಿರುವುದು ಗಮನ ಸೆಳೆದಿದೆ.

ಇದೇ ವೇಳೆ ಸಚಿವ ನರೇಂದ್ರ ಸ್ವಾಮಿ ಅವರು ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದ್ದಾರೆ.

ಒಂದೆಡೆ ಮಹದೇವಪ್ಪ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಾಲೋಚನಾ ಸಮಾವೇಶದ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆಯ ಸಿದ್ಧತೆಗಳು ಮುಂದುವರಿದಿವೆ. ಒಂದೇ ಅವಧಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಕಾಂಗ್ರೆಸ್‌ನೊಳಗಿನ ನಾಯಕತ್ವದ ಸಮೀಕರಣಗಳ ಬಗ್ಗೆ ಚರ್ಚೆಗೆ ಕಾರಣವಾಗಿವೆ.

ಆದರೆ, ಇಬ್ಬರು ನಾಯಕರ ನಡುವಿನ ಅಸಮಾಧಾನಕ್ಕೆ ನಿಖರ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರ ಮುಂದಿನ ನಡೆ ಏನಿರಲಿದೆ ಎಂಬುದನ್ನು ರಾಜಕೀಯ ವಲಯ ಕುತೂಹಲದಿಂದ ಗಮನಿಸುತ್ತಿದೆ.