ನಂಜನಗೂಡು: ಕೆಸರು ಗದ್ದೆಗೆ ಇಳಿದ ಎನ್ಎಸ್ಎಸ್ ಶಿಬಿರಾರ್ಥಿಗಳು, ಭತ್ತದ ಪೈರು ನೆಟ್ಟು ನಾಟಿ ಮಾಡಿ, ಗ್ರಾಮಸ್ಥರ ಗಮನ ಸೆಳೆದಿದ್ದಾರೆ.

ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಮೈಸೂರು ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಅಧಿಕಾರಿಗಳಾದ ಡಾ.ಪಿ.ಎಸ್. ಮಧುಸೂದನ್ ಮತ್ತು ಡಾ.ಎಸ್. ಕೃಷ್ಣಪ್ಪ ನೇತೃತ್ವದಲ್ಲಿ ನಡೆದ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ತಿಳಿಸಲು, ಮತ್ತು ರೈತರು ಬೆಳೆ ಬೆಳೆಯಲು ಎಷ್ಟು ಕಷ್ಟ ಪಡುತ್ತಾರೋ ಎಂಬುದನ್ನು ಪರಿಚಯಿಸಲು ವಿದ್ಯಾರ್ಥಿಗಳನ್ನು ಕೆಸರು ಗದ್ದೆಗೆ ಇಳಿಸಿ, ಭತ್ತದ ಪೈರುಗಳನ್ನು ನೀಡಿ ನಾಟಿ ಮಾಡಿಸಿದ್ದಾರೆ.

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಂತಸದಿಂದಲೇ ಕೆಸರು ಗದ್ದೆಗಿಳಿದು, ರೈತರಂತೆ ಯುವಕರು ತಲೆಗೆ ಟವಲ್ ಪೇಟ ಧರಿಸಿದರು, ಯುವತಿಯರು ನಾವೇನು ಕಮ್ಮಿ ಇಲ್ಲ ಎಂದು ಭತ್ತದ ಪೈರು ನೆಟ್ಟು ಅನುಭವವನ್ನು ಪಡೆದುಕೊಂಡಿದ್ದಾರೆ.

ಸುಮಾರು 60ಕ್ಕೂ ಹೆಚ್ಚು ಎನ್ಎಸ್ಎಸ್ ವಿದ್ಯಾರ್ಥಿಗಳು ಭತ್ತದ ಪೈರು ನೆಟ್ಟು ನಾಟಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಬೊಕ್ಕಹಳ್ಳಿ ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಮೈಸೂರು ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ.ಪಿ.ಎಸ್ ಮಧುಸೂದನ್ ಮತ್ತು ಡಾ.ಎಸ್ ಕೃಷ್ಣಪ್ಪ ರವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.