ಶಿವಮೊಗ್ಗ: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿಯನ್ನು ಸಿಎಂ ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ. ಈ ಕುರಿತು ಇಂದು ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಅಮೆರಿಕ ಇರಾನ್ ಮೇಲೆ ಮಾಡಿರುವ ದಾಳಿ ಅನಗತ್ಯವಾದುದು.
ಒಂದೆಡೆ ಶಾಂತಿ ಮಾತ್ರ ಪಠಿಸುವ ಅಮೆರಿಕ ಮತ್ತೊಂದೆಡೆ ಯುದ್ಧ ಮಾಡುತ್ತದೆ. ಅಮೆರಿಕಾ ತದ್ವಿರುದ್ಧವಾದ ನಿಲುವು ಹೊಂದಿದ್ದು, ಇದನ್ನು ಖಂಡನೀಯ ಎಂದು ಸಿಎಂ ಹೇಳಿದರು.
ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಅರಬ್ ದೇಶಗಳಲ್ಲಿ ಸಿಲುಕಿರುವ ಬಳ್ಳಾರಿಯ 30 ಜನರನ್ನು ವಾಪಸ್ಸು ಕರೆತರಲಾಗುವುದು ಎಂದು ಹೇಳಿದರಲ್ಲದೆ ದುಬೈ ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ದುಬೈದಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಹೋಟೆಲಿನಲ್ಲಿ ಸುರಕ್ಷಿತವಾಗಿರುವುದಾಗಿ ಹೇಳಿದರು ಎಂದರು. ಇರಾನ್ ಅಧ್ಯಕ್ಷ ಆಯಾತೊಲ್ಲಾ ಖಮೇನಿ ಹತ್ಯೆಯಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

