ಮೈಸೂರು: ಮಾತು ಬಾರದ, ಕಿವಿ ಕೇಳದ ವ್ಯಕ್ತಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಿತ್ರವೆಂದರೆ ಬಂಧಿತ ಆರೋಪಿಗಳೂ ಕಿವಿ ಕೇಳದ, ಮಾತು ಬಾರದವರೇ ಆಗಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಶ್ರೀನಿವಾಸ (37), ಅಮೃತೂರು ಗ್ರಾಮದ ನಿವಾಸಿ ಐ.ಎಸ್. ಗಂಗಾಧರ (23) ಬಂಧಿತ ಆರೋಪಿಗಳು. ನಂಜನಗೂಡು ತಾಲೂಕು ದೇವಿರಮ್ಮನಹಳ್ಳಿ ಪಾಳ್ಯದ ನಿವಾಸಿ ಸ್ವಾಮಿ (32) ಎಂಬುವರ ಕೊಲೆ ಪ್ರಕರಣ ದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಘಟನೆ ವಿವರ:
ನನ್ನ ಪತಿ ಸ್ವಾಮಿ ಕಾಣೆಯಾಗಿದ್ದಾರೆ ಎಂದು ಮಾ.4ರಂದು ದೇವರಮ್ಮನಹಳ್ಳಿ ಪಾಳ್ಯದ ನಿವಾಸಿ ಸವಿತಾ ನಂಜನಗೂಡು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಸ್ವಾಮಿ, ಸವಿತಾ ಇಬ್ಬರೂ ಮಾತು ಬಾರದೇ, ಕಿವಿ ಕೇಳದವರೇ ಆಗಿದ್ದಾರೆ. ಈ ಇಬ್ಬರು ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು.
ಇವರ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿತು. ಸವಿತಾ ಅವರನ್ನು ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ವಿಚಾರಣೆಗೊಳಪಡಿಸಿ ಅವರ ಹೇಳಿಕೆ ಆಧಾರದ ಮೇರೆಗೆ ಶ್ರೀನಿವಾಸ ಹಾಗೂ ಗಂಗಾಧರ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ಇಬ್ಬರೂ ಮಾತು ಬಾರದ ಕಿವಿ ಕೇಳದ ವ್ಯಕ್ತಿಗಳಾಗಿರುವುದು ಪೊಲೀಸರಿಗೆ ತಿಳಿಯಿತು. ಅಲ್ಲದೇ ಇವರ ಕೊಲೆ ಕೃತ್ಯವೂ ಬಯಲಾಯಿತು.
ವಿಚಾರಣೆ ವೇಳೆ ಸವಿತಾಗೆ ಆರೋಪಿ ಶ್ರೀನಿವಾಸನ ಪರಿಚಯವಿರುವುದು ಮಾತ್ರವಲ್ಲದೆ, ಇಬ್ಬರು ಪರಸ್ಪರ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿದ್ದರು ಎಂಬುದು ತಿಳಿದು ಬಂದಿದೆ. ಶ್ರೀನಿವಾಸನಿಗೆ ಸವಿತಾ ಮೇಲೆ ಪ್ರೀತಿಯಾಗಿದ್ದಲ್ಲದೆ, ಹಣಕಾಸು ಸಹಾಯ ಮಾಡಿದ್ದ. ಸವಿತಾ ಮೂಲಕ ಆಕೆ ಗಂಡ ಸ್ವಾಮಿಯು ಸಹ ಶ್ರೀನಿವಾಸನಿಗೆ ಪರಿಚಯವಾಗಿದ್ದ. ಅಲ್ಲದೆ ಸ್ವಾಮಿಗೂ ಶ್ರೀನಿವಾಸ ಸಾಲ ನೀಡಿದ್ದ. ಸ್ವಾಮಿ ಕೊಲೆ ಮಾಡಿದರೆ ಸವಿತಾಳನ್ನು ತಾನು ಮದುವೆಯಾಗಬಹುದೆಂದು ಆಲೋಚಿಸಿ ಯೋಜನೆ ರೂಪಿಸಿಕೊಂಡ ಶ್ರೀನಿವಾಸ ಫೆ.12ರಂದು ಹಣ ನೀಡುವುದಾಗಿ ಸ್ವಾಮಿಯನ್ನು ಕುಣಿಗಲ್ ತಾಲ್ಲೂಕಿನ ಅಮೃತ್ತೂರಿಗೆ ಕರೆಸಿಕೊಂಡ ಮದ್ಯಪಾನ ಮಾಡಿಸಿದ್ದಾನೆ.
ಬಳಿಕ ಶ್ರೀನಿವಾಸ ತನ್ನ ಸ್ನೇಹಿತರಾದ ಗಂಗಾಧರ ಮತ್ತು ಮತ್ತೋರ್ವನೊಂದಿಗೆ ಸೇರಿ ಕುಣಿಗಲ್ ತಾಲ್ಲೂಕು ಹೊಸಪುರದ ಜಮೀನಿನಲ್ಲಿ ಸ್ವಾಮಿ ಕುತ್ತಿಗೆಗೆ ಹೊಡೆದು ಕೊಲೆ ಮಾಡಿ, ಕಲ್ಲನ್ನು ಮೃತ ದೇಹಕ್ಕೆ ಕಟ್ಟಿ ಶವವನ್ನು ಬಾವಿಗೆ ಹಾಕಿದ್ದರು. ಆರೋಪಿಗಳಾದ ಶ್ರೀನಿವಾಸ ಮತ್ತು ಗಂಗಾಧರ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಹೊಸಪುರದಲ್ಲಿ ತನಿಖೆ ನಡೆಸಿ ಸ್ವಾಮಿ ಶವ ಪತ್ತೆಮಾಡಿದ್ದಾರೆ. ಅಲ್ಲದೇ ಅವರಿಂದ ಕೃತ್ಯಕ್ಕೆ ಬಳಿಸಿದ್ದ ಬೈಕ್, ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿಗಳಾದಸಿ. ಮಲ್ಲಿಕ್, ಎಲ್.ನಾಗೇಶ್, ನಂಜನಗೂಡು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಜಿ.ಎಸ್.ರಘು ಮಾರ್ಗದರ್ಶನದಲ್ಲಿ ನಂಜನಗೂಡು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಎಸ್.ಆನಂದ್, ಎಸ್‌ಐ ನಾಗ ರಾಜು, ಸಿಬ್ಬಂದಿಗಳಾದ ಕೆ.ಮಹೇಶ್, ರಾಜೇಗೌಡ, ಬಿ.ಸುರೇಶ್, ದೇವರಾಜು, ಪಿ.ವೆಂಕಟೇಶ್, ರೇಖಾ, ಪಿ.ಅನಿಲ್, ಆರ್.ಆರ್.ಗಣೇಶ್, ಸುನೀಲ್ ಕುಮಾರ್, ಸುರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

